ಬೆಳಗಾವಿ : ಮಕ್ಕಳಿಗೆ ಶ್ರೇಷ್ಠ ಹಾಗೂ ಉನ್ನತ ವಿದ್ಯಾಭ್ಯಾಸ ನೀಡಿ. ಅದೇ ದೇವರು ಮೆಚ್ಚುವ ಕೆಲಸವಾಗಲಿದೆ ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಲೋಗೋ ಅನಾವರಣ ಹಾಗೂ ದಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿ. ಅದನ್ನು ದೇವರು ಮೆಚ್ಚುತ್ತಾನೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಸರಕಾರಿ, ಅನುದಾನ ಮತ್ತು ಅನುದಾನ ರಹಿತವಾಗಿ ರಾಜ್ಯದಲ್ಲಿ ಒಂದು ಕೋಟಿ ಆರು ಲಕ್ಷದಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಷ್ಟೊಂದು ದೊಡ್ಡ ಇಲಾಖೆಯ ಸೇವೆ ಮಾಡುವುದು ನನ್ನ ಪಾಲಿನ ಸೌಭಾಗ್ಯವಾಗಿದೆ. ಇದನ್ನು ಅತ್ಯಂತ ನಿಷ್ಠೆಯಿಂದ ತಾನು ಮಾಡುತ್ತಿದ್ದೇನೆ ಎಂದು ಹೇಳಿದರು.
ಇದುವರೆಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅದೇ ವರ್ಷ ಮತ್ತೆ ತರಗತಿಗೆ ಹೋಗದಂತ ಪರಿಸ್ಥಿತಿ ಇತ್ತು. ಆದರೆ, ಈ ವರ್ಷದಿಂದ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಮೂಲಕ ಶಾಲೆಯಿಂದ ವಂಚಿತವಾಗುತ್ತಿದ್ದ ವಿದ್ಯಾರ್ಥಿಗಳಿಗೆ ಅದೇ ವರ್ಷಕ್ಕೆ ಪರೀಕ್ಷೆ ನಡೆಸಿಕೊಡುವ ಮೂಲಕ ಅನುಕೂಲತೆ ಮಾಡಿಕೊಡಲಾಗಿದೆ. ಈ ಮೂಲಕ ವಿದ್ಯೆಯಿಂದ ವಂಚಿತರಾಗುತ್ತಿದ್ದ ಈ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ ಎಂದು ಹೇಳಿದರು.
ರಾಜ್ಯದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಣ ಸಲುವಾಗಿ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದೆ. ಸಾವಿರಾರು ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾಭ್ಯಾಸಕ್ಕೆ ಗರಿಷ್ಠ ಆದ್ಯತೆ ನೀಡಿದ್ದೇವೆ. ನಮ್ಮ ಇಲಾಖೆ ಸರಕಾರಿ ಇಲಾಖೆಗಳಲ್ಲಿ ಅತ್ಯಂತ ದೊಡ್ಡ ಇಲಾಖೆ ಎಂದು ಗುರುತಿಸಿಕೊಂಡಿದ್ದು ರಾಜ್ಯ ಸರಕಾರ ಇದರ ನಿರ್ವಹಣೆಗೆ ಗರಿಷ್ಠ ಗಮನ ನೀಡಿದೆ ಎಂದು ಅವರು ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಿಕ್ಷಣ ಕ್ಷೇತ್ರದ ತಮ್ಮ ವಿಚಾರಗಳನ್ನು ಈ ಸಂದರ್ಭದಲ್ಲಿ ಬಿಚ್ಚಿಟ್ಟರು.