ಜನಜೀವಾಳ ಸರ್ಚ್ ಲೈಟ್ ಬೆಳಗಾವಿ: ಬೆಳಗಾವಿಯ ಗೃಹ ಮಂಡಳಿಯಿಂದ ಬಹುದೊಡ್ಡ ಅನಾಹುತ ಸೃಷ್ಟಿಯಾಗಿದೆ. ಗೃಹ ಮಂಡಳಿ ಇದೀಗ ಸೃಷ್ಟಿಸಿರುವ ಈ ಅಧ್ವಾನವನ್ನು ಸರಿಪಡಿಸಲು ಆ ಬ್ರಹ್ಮ ಬಂದರೂ ಅಸಾಧ್ಯ. ಅಷ್ಟೊಂದು ರೀತಿಯಲ್ಲಿ ಇಲ್ಲಿ ಅನಾಹುತ ನಡೆಸಲಾಗಿದೆ.
ಬೆಳಗಾವಿ ತಾಲೂಕು ಬೆನಕನಹಳ್ಳಿಯಲ್ಲಿ ಗೃಹ ಮಂಡಳಿ ನಡೆಸಿರುವ ಕಿತಾಪತಿ ಸಣ್ಣದೇನಲ್ಲ.
ಮೊಗೆದಷ್ಟು ದೊಡ್ಡ ಪ್ರಮಾಣದಲ್ಲಿ ಗೃಹ ಮಂಡಳಿಯ ಭ್ರಷ್ಟಾಚಾರ ಹೊರ ಬರುತ್ತಿದೆ.
ಯಾವ ಜಾಗ ಇನ್ನೂ ಗೃಹ ಮಂಡಳಿ ವ್ಯಾಪ್ತಿಗೆ ಬಂದಿಲ್ಲವೋ ಅಲ್ಲಿಯೇ ರಸ್ತೆ, ಲೈಟ್ ಮುಂತಾದ ಕೆಲಸ ಕಾರ್ಯಗಳು ಜೋರಾಗಿ ನಡೆದಿವೆ. ಈ ಮೂಲಕ ಸರಕಾರದ ಕೋಟ್ಯಂತರ ರೂಪಾಯಿ ಹಣವನ್ನು ದುಂದು ವೆಚ್ಚ ಮಾಡುತ್ತಿರುವುದು ಜನತೆಯ ಪಾಲಿಗೆ ಬಹುದೊಡ್ಡ ಹೊರೆ ಎನ್ನಬಹುದು.
ಒಟ್ಟಾರೆ, ಬೆಳಗಾವಿ ಗೃಹ ಮಂಡಳಿ ಬಹುದೊಡ್ಡ ಹಗರಣವನ್ನೇ ಸೃಷ್ಟಿಸಿದೆ. ಒಂದು ಜಾಗ ಇಲ್ಲಿ ಗೃಹ ಮಂಡಳಿಗೆ ಸೇರಿದೆ. ಆದರೆ, ಇನ್ನೊಂದು ಜಾಗ ಇನ್ನೂ ಗೃಹ ಮಂಡಳಿ ವ್ಯಾಪಿಗೆ ಸಿಕ್ಕಿಯೇ ಇಲ್ಲ. ಆದರೆ ಎಲ್ಲವನ್ನು ಇಲ್ಲಿ ರಾಜಾರೋಷವಾಗಿ ಮಿಸ್ ಗೈಡ್ ಮಾಡಲಾಗುತ್ತಿದೆ. ನ್ಯಾಯಾಲಯದಲ್ಲಿರುವ ವಿವಾದಾಸ್ಪದ ಜಾಗದಲ್ಲಿ ಈಗ ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಕೆಲಸಗಳನ್ನು ಮಾಡಲಾಗುತ್ತಿದೆ. ಯಾವ ಪ್ರದೇಶ ಗೃಹ ಮಂಡಳಿ ವ್ಯಾಪ್ತಿಗೆ ಸೇರ್ಪಡೆಯಾಗಿದೆಯೋ ಅಲ್ಲೇ ಕೆಲಸ ಮಾಡಬೇಕು ಎಂಬ ಸ್ಪಷ್ಟ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ವಿವಾದಾಸ್ಪದವಾಗಿರುವ ಇನ್ನೂ ನ್ಯಾಯಾಲಯದಲ್ಲಿರುವ ಜಾಗದಲ್ಲಿ ಕೆಲಸ ಮಾಡಲಾಗುತ್ತಿರುವುದು ಅತ್ಯಂತ ದುರ್ದೈವದ ಸಂಗತಿ.
ಬೆಳಗಾವಿಯ ಗೃಹ ಮಂಡಳಿ ಮುಖ್ಯ ಅಧಿಕಾರಿಗೆ ಸರಿಯಾದ ಮಾಹಿತಿ ನೀಡದೆ ಅಭಿಯಂತರರೇ ಇಲ್ಲಿ ಮುಖ್ಯವಾಗಿ ಒಂದು ರೀತಿಯಲ್ಲಿ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರ ತಂತ್ರ-ಕುತಂತ್ರ ಅಡಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಡಿದೆ.
ಬೆನಕನಹಳ್ಳಿಯ ಸರ್ವೆ ನಂಬರ್ 83/1 ರಲ್ಲಿ ಕೇಸಿದೆ. ಆದರೆ ಅಲ್ಲಿಯೇ ಈಗ ಒಂದು ಕಿಲೋಮೀಟರ್ ಸಿಸಿ ರಸ್ತೆಯನ್ನು ಮಾಡಲಾಗುತ್ತಿದೆ. ಈ ಮೂಲಕ ಸರಕಾರದ ಹಣವನ್ನು ಲೂಟಿ ಮಾಡಲಾಗುತ್ತದೆ. ಒಟ್ಟಾರೆ ಬೆಳಗಾವಿಯ ಗೃಹ ಮಂಡಳಿ ಬಹುದೊಡ್ಡ ಗೋಲ್ ಮಾಲ್ ಗೆ ಕೊನೆಯೇ ಇಲ್ಲ ಎನ್ನಬಹುದು.
ಇಲ್ಲಿ ಎಲ್ಲವೂ ಫೋರ್ಜರಿಯಾಗಿಯೇ ನಡೆಯುತ್ತದೆ. ಇಲ್ಲಿರುವ ಕೆಲವರು ಸಭ್ಯರಂತೆ ಕಂಡುಬಂದರೂ ಸಹಾ ಅವರಂತಹ ಖತರ್ನಾಕ್ ಗಳು ಮತ್ತೊಬ್ಬರಿಲ್ಲ ಎಂಬ ಮಾತು ಸ್ವತಃ ಗೃಹ ಮಂಡಳಿ ವಠಾರದಿಂದಲೇ ಕೇಳಿ ಬಂದಿದೆ.
ಗೃಹ ಮಂಡಳಿ ಸೃಷ್ಟಿಸುತ್ತಿರುವ ಬಹುದೊಡ್ಡ ರಾದ್ದಾಂತಗಳಿಗೆ ಯಾವಾಗ ತೆರೆ ಬೀಳಬಹುದು ಎಂದು ಬೆಳಗಾವಿಯ ಜನ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.