ಬೆಳಗಾವಿ: ಬೆಳಗಾವಿ ತಾಲೂಕು ಸುಳೇಭಾವಿ ಗ್ರಾಮದಲ್ಲಿ ಬುಧವಾರ ನೇಕಾರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಸುಳಿಗೆ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡವರು.
ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಅವರ ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.