ಬೆಂಗಳೂರು : ವಾಡಿಕೆಯಂತೆ ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಗಿಫ್ಟ್ ನಲ್ಲಿ ಆಯ್ದ ಪತ್ರಕರ್ತರು ಪತ್ರಕರ್ತರಿಗೆ ಸಿಹಿ ತಿಂಡಿಯ ಜತೆ ಎರಡೂವರೆ ಲಕ್ಷ ₹ ಕೊಟ್ಟು ಕಳುಹಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದಲೇ ಪತ್ರಕರ್ತರಿಗೆ ಆಮಿಷ ಒಡ್ಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಇದೀಗ ಮುಖ್ಯಮಂತ್ರಿ ಕಚೇರಿ ಸಾಕಷ್ಟು ಮುಂಚಿತವಾಗಿ ಪತ್ರಕರ್ತರಿಗೆ ಸುದ್ದಿಗಾಗಿ ಕಾಸು ನೀಡಿದೆ ಎಂಬ ಗುಮಾನಿ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಕಚೇರಿ ಈ ನಡೆಯನ್ನು ವಿರೋಧಿಸಿ ಹಣ ಹಿಂದಿರುಗಿಸಿ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಈ ನಡುವೆ ಪತ್ರಕರ್ತರಿಗೆ ಲಂಚದ ಬದಲು ಗಿಫ್ಟ್ ಹೆಸರಿನಲ್ಲಿ ಸಿಹಿ ತಿಂಡಿ ವಿತರಿಸಿ ಲಕ್ಷಾಂತರ₹ಹಣ ನೀಡಿದ ಬಗ್ಗೆ ಇದೀಗ ಲೋಕಾಯುಕ್ತ ಮತ್ತು ಲೋಕಾಯುಕ್ತ ವಿಭಾಗದ ಎಡಿಜಿಪಿ ಅವರಿಗೆ ಜನಾಧಿಕಾರ ಸಂಘರ್ಷ ಪರಿಷತ್ ದೂರು ನೀಡಿದೆ. ಮುಖ್ಯಮಂತ್ರಿಗಳು ಮತ್ತು ಮಾಧ್ಯಮ ಸಂಯೋಜಕರು ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018 ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಮುಖ್ಯಮಂತ್ರಿಗಳ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣ ನೀಡಲಾಗಿದೆ ಎಂಬುದಕ್ಕೆ ಇದರಿಂದ ಮತ್ತಷ್ಟು ಪುಷ್ಟಿ ಬಂದಂತಾಗಿದೆ. ಮುಖ್ಯಮಂತ್ರಿ ಕಚೇರಿಯೆ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಯಾವ ರೀತಿಯಲ್ಲೂ ಸಮರ್ಥನೆಯಾಗದು. ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಸರಕಾರದ ಪರವಾಗಿ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ತನ್ನ ದೂರಿನಲ್ಲಿ ಸ್ಪಷ್ಟೀಕರಿಸಿದೆ.