ಬೆಳಗಾವಿ : ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಘೋಷಣೆಯಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಸರಕಾರಿ ಮರಾಠಿ ಮಾಧ್ಯಮ ಶಾಲೆಯ ಶಿಕ್ಷಕಿ ಅಸ್ಮಾ ಇಸ್ಮಾಯಿಲ್ ನದಾಫ್ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಳ್ಳಾಗಡ್ಡಿವಾಡಿ ಕನ್ನಡ ಸರಕಾರಿ ಶಾಲೆಯ ಶಿಕ್ಷಕಿ ಪದ್ಮಶ್ರೀ ಸುರೇಶ ರೂಗೆ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಒಲಿದು ಬಂದಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಈ ಇಬ್ಬರು ಶಿಕ್ಷಕಿಯರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಸೆಪ್ಟೆಂಬರ್ 5 ರಂದು ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ದೇಶದಲ್ಲೆಡೆ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಅಂದು ನೀಡಲಾಗುತ್ತಿದೆ.
ಬೆಂಗಳೂರು ವರದಿ…
ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ: 20 ಪ್ರಾಥಮಿಕ, 11 ಪ್ರೌಢಶಾಲೆ ಶಿಕ್ಷಕರ ಆಯ್ಕೆ :
ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆಯಿಂದ ಪ್ರಕಟ ಮಾಡಲಾಗಿದೆ. ಪ್ರಾಥಮಿಕ ಶಾಲೆಯ ವಿಭಾಗದಲ್ಲಿ 20 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಶಿಕ್ಷಕರ ದಿನಾಚರಣೆ ದಿನದಂದು ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ. ಜೊತೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಶಿಕ್ಷಕಿಯರಿಗೆ ಅಂದೇ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬಹುಮಾನದ ವಿವರ ಹೀಗಿದೆ
ಈ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರುಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಇಪಿ 308 ಪಿಬಿಎಸ್ 2021, ದಿನಾಂಕ: 12.09.2022 ರ ಅನುಸಾರ ತಲಾ ರೂ.25,000 ರೂ. ನಂತೆ ಒಟ್ಟು 7,75,000 ರೂ. ಗಳ ನಗದು ಪುರಸ್ಕಾರ ನೀಡಲು ಹಾಗೂ ಸದರಿ ವೆಚ್ಚವನ್ನು ರಾಜ್ಯ ಶಿಕ್ಷಣ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಬೆಂಗಳೂರು ಇಲ್ಲಿಂದ ಭರಿಸಲು ಅನುಮತಿ ನೀಡಿ ಆದೇಶಿಸಿದೆ.
ಮೊನ್ನೆಯಷ್ಟೇ ಕೇಂದ್ರ ಶಿಕ್ಷಣ ಇಲಾಖೆ ನೀಡುವ 2024 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ 16 ಶಿಕ್ಷಕರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಅದರಂತೆ ಕರ್ನಾಟಕದ ಬೆಂಗಳೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೇಶವ್ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದ್ದು, ಅವರಿಗೂ ಸೆಪ್ಟೆಂಬರ್ 5ರಂದು ಶಿಕ್ಷಣ ಇಲಾಖೆಯಿಂದ ಪ್ರಶಸ್ತಿ ಪ್ರದಾನ ಮಾಲಾಗುತ್ತದೆ.