ರಾಂಚಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್ ಶುಕ್ರವಾರ ರಾಂಚಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ, ಬಾಬುಲಾಲ್ ಮರಾಂಡಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದರು. ಅವರನ್ನು ಬಿಜೆಪಿಗೆ ಸ್ವಾಗತಿಸಿದ ನಂತರ ಚಂಪೈ ಸೊರೇನ್ ಭಾವೋದ್ವೇಗಕ್ಕೆ ಒಳಗಾದರು.
“ಜನರಿಗೆ ನ್ಯಾಯವನ್ನು ತಲುಪಿಸಲು ನಾನು ಬದ್ಧನಾಗಿದ್ದೇನೆ, ನಾನು ನನ್ನ ಬೆವರು ಮತ್ತು ರಕ್ತದಿಂದ ಜೆಎಂಎಂ ಅನ್ನು ಕಟ್ಟಿ ಬೆಳೆಸಿದ್ದೇನೆ ಆದರೆ ಅಲ್ಲಿಯೇ ಅವಮಾನಕ್ಕೆ ಒಳಗಾಗಿದ್ದೇನೆ. ನನಗೆ ಬಿಜೆಪಿ ಸೇರಲು ಅನಿವಾರ್ಯತೆ ಸೃಷ್ಟಿಸಲಾಯಿತು. ನಾನು ಈಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಸದಸ್ಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಅವಮಾನ ಸಹಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ” ಎಂದು ಚಂಪೈ ಸೊರೇನ್ ಹೇಳಿದ್ದಾರೆ.
“ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಜಾರ್ಖಂಡ್ ಸರ್ಕಾರವು ನನ್ನ ಮೇಲೆ ನಿಗಾ ಇಟ್ಟ ನಂತರ, ಬಿಜೆಪಿ ಸೇರುವ ನನ್ನ ಸಂಕಲ್ಪ ಬಲಗೊಂಡಿತು ಜಾರ್ಖಂಡ್ನ ಸಂತಾಲ್ ಪರಗಣದಲ್ಲಿ ಬಿಜೆಪಿ ಆದಿವಾಸಿಗಳ ಗುರುತನ್ನು ಉಳಿಸಬಹುದು ಮತ್ತು ಒಳನುಸುಳುವಿಕೆಯನ್ನು ತಡೆಯಬಹುದು ಎಂದು ಅವರು ಹೇಳಿದರು.
ಸೊರೇನ್ ಅವರ ಸೇರ್ಪಡೆಯು ಜೆಎಂಎಂನ ಬಲವಾದ ಬೆಂಬಲದ ನೆಲೆಯಾದ ಪರಿಶಿಷ್ಟ ಪಂಗಡಗಳೊಂದಿಗೆ ಅದರ ಸಂಪರ್ಕವನ್ನು ಬಲಪಡಿಸುವ ಪಕ್ಷದ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡುತ್ತದೆ ಎಂದು ನಂಬಲಾಗಿದೆ.
67 ವರ್ಷದ ಬುಡಕಟ್ಟು ನಾಯಕ ಚಂಪೈ ಸೊರೇನ್ ಎರಡು ದಿನಗಳ ಹಿಂದೆ ರಾಜ್ಯ ವಿಧಾನಸಭೆಯ ಶಾಸಕ ಸ್ಥಾನಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ಗೆ ಪತ್ರ ಬರೆದು, ಪಕ್ಷದ ಪ್ರಸ್ತುತ ಶೈಲಿ ಮತ್ತು ಅದರ ನೀತಿಗಳಿಂದ ನೊಂದ ನಂತರ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದ್ದಾರೆ. “ನನ್ನ ನಿರ್ಧಾರ (ಬಿಜೆಪಿ ಸೇರುವುದು) ಜಾರ್ಖಂಡದ ಹಿತಾಸಕ್ತಿಯಾಗಿದೆ… ನಾನು ಹೋರಾಟಕ್ಕೆ ಒಗ್ಗಿಕೊಂಡಿದ್ದೇನೆ” ಎಂದು ಅವರು ಹೇಳಿದರು.
“ನನಗೆ ಕುಟುಂಬದಂತಿರುವ ಜೆಎಂಎಂ ಪಕ್ಷವನ್ನು ನಾನು ತೊರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲಿ ಎಂದಿಗೂ ಊಹಿಸಿರಲಿಲ್ಲ … ಹಿಂದಿನ ಕಹಿ ಘಟನೆಗಳಿಂದ ತುಂಬಾ ನೊಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು … ನನಗೆ ನೋವಾಗಿದೆ. ಪಕ್ಷ ತನ್ನ ತತ್ವದಿಂದ ವಿಮುಖವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
1990 ರ ದಶಕದಲ್ಲಿ ಜಾರ್ಖಂಡ್ ರಾಜ್ಯವನ್ನು ರಚಿಸುವ ಹೋರಾಟಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಪಕ್ಷದ ಕಾರ್ಯಕರ್ತರಲ್ಲಿ “ಜಾರ್ಖಂಡ ಹುಲಿ” ಎಂದೂ ಕರೆಯಲ್ಪಡುವ ಚಂಪೈ ಸೋರೆನ್, ನನ್ನ ಸೇರ್ಪಡೆ ಬುಡಕಟ್ಟು ಜನಾಂಗದ ಗುರುತು ಮತ್ತು ಅಸ್ತಿತ್ವವನ್ನು ಉಳಿಸುವ ಉದ್ದೇಶವಾಗಿದೆ ಎಂದು ಹೇಳಿದ್ದರು. ಬಾಂಗ್ಲಾದೇಶದಿಂದ ಒಳನುಸುಳುವಿಕೆ “ಅತಿರೇಕದ” ಕಾರಣದಿಂದಾಗಿ ಅಪಾಯದಲ್ಲಿದೆ. ಬಿಜೆಪಿ ಮಾತ್ರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಮತಬ್ಯಾಂಕ್ ರಾಜಕಾರಣಕ್ಕಾಗಿ ಇತರೆ ಪಕ್ಷಗಳು ಇದನ್ನು ಕಡೆಗಣಿಸುತ್ತಿವೆ ಎಂದರು.
ಈ ವರ್ಷ ಫೆಬ್ರವರಿ 2 ರಂದು ಜಾರ್ಖಂಡ್ನ 12 ನೇ ಮುಖ್ಯಮಂತ್ರಿಯಾಗಿ ಚಂಪೈ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ್ದರು. ಜುಲೈ 4 ರಂದು ಜಾರ್ಖಂಡ್ನ 13 ನೇ ಮುಖ್ಯಮಂತ್ರಿಯಾಗಿ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನದ ಮೊದಲು ಅವರು ಜುಲೈ 3 ರಂದು ಹುದ್ದೆಗೆ ರಾಜೀನಾಮೆ ನೀಡಿದರು.