ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೈಕೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಬೆಳಗಾವಿ ಜಿಲ್ಲೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಿಯೋಗವೊಂದು ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಲಿದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳನ್ನು ಭೆಟ್ಟಿಯಾಗಲಿದೆ. ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ ಬೆಳಗಾವಿ ಪಾಲಿಕೆಗೆ ಸಿಗಬೇಕಾದ ಅನುದಾನವು ಸಕಾಲದಲ್ಲಿ ಲಭಿಸುತ್ತಿಲ್ಲವಾದ್ದರಿಂದ ಪಾಲಿಕೆಯು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ. ಮಂಗಳವಾರ ಅಗಷ್ಟ್ 27 ರಂದು ನಡೆದ ಪಾಲಿಕೆಯ ತುರ್ತು ಸಭೆಯಲ್ಲಿ ಇನ್ನೂ ಅನೇಕ ವಿಷಯಗಳ ಮೇಲೆ ಪಾಲಿಕೆಯ ಸದಸ್ಯರು ಬೆಳಕು ಚೆಲ್ಲಿದ್ದಾರೆ. ಬೆಳಗಾವಿ ಮಹಾನಗರದ 58 ವಾರ್ಡುಗಳಲ್ಲಿ ಕೈಕೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರದ ನೆರೆವಿನ ಅವಶ್ಯಕತೆಯಿದೆ. ರಾಜ್ಯ ಸರಕಾರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಧ್ಯ ಪ್ರವೇಶ ಮಾಡುವ ಮೂಲಕ ಪಾಲಿಕೆಯನ್ನು ಆರ್ಥಿಕ ಸಂಕಷ್ಟ ದಿಂದ ಪಾರು ಮಾಡಬೇಕಾಗಿದೆ. ಪಾಲಿಕೆಯಲ್ಲಿನ ಸದ್ಯದ ಬೆಳವಣಿಗೆಗಳು ಕಳವಳಕಾರಿಯಾಗಿದ್ದು ಈ ಬಗ್ಗೆ ಕ್ರಿಯಾ ಸಮಿತಿಯ ನಿಯೋಗವು ರಾಜ್ಯ ಸರಕಾರದ ಗಮನ ಸೆಳೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಅಶೋಕ ಚಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.