ದೀಪಾವಳಿ ಹಾಗೂ ಗ್ರಹಣದ ದಿನ ಪಾರ್ಟಿ ಮಾಡಲು ಹೋಗಿ ನಾಪತ್ತೆಯಾದ ಯುವಕ..?
ಕಾಕತಿ ಪೊಲೀಸರ ನೇತೃತ್ವದಲ್ಲಿ ಶೋಧ..!
ವರ್ಷಕ್ಕೆ ಎರಡು ಬಲಿ ತೆಗೆದುಕೊಳ್ಳುತ್ತಿರುವ ಈ ಖಡಿಮಷಿನ್..?
ಬೆಳಗಾವಿ: ತಾಲೂಕಿನ ನಗರಕ್ಕೆ ಅಂಟಿಕೊಂಡಿರುವ ಅಲತಗೆ ಹದ್ದಿನಲ್ಲಿರುವ ಖಡಿ ಮಷಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮೂವರು ಯುವಕರು ಪಾರ್ಟಿ ಮಾಡಿದ್ದಾರೆ. ಕುಡಿದ ನಶೆಯಲ್ಲಿದ್ದ ಮೂವರು ಯುವಕರಲ್ಲಿ ಓರ್ವ ನೀರಿನ ಆಳ ನೋಡಲು ನೀರಲ್ಲಿ ಹೋಗಿ ನಾಪತ್ತೆಯಾಗಿರುವ ಘಟನೆ (ಇಂದು )ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.
22 ವರ್ಷದ ಅನಗೋಳ ಗ್ರಾಮದ ರಘುನಾಥ್ ಪೇಟ್ ನಿವಾಸಿಯಾಗಿರುವ ಸತೀಶ ಹನುಮಂತಪ್ಪಾ ಹನಮಣ್ಣವರ ನೀರು ಪಾಲಾಗಿರುವ ಯುವಕ.
ಇತ ಪೇಟಿಂಗ್ ಕೆಲಸ ಮಾಡುತ್ತಿದ್ದ. ದೀಪಾವಳಿ ಹಬ್ಬದ ನಿಮಿತ್ತ ಮೂವರು ಸ್ನೇಹಿತರು ಪಾರ್ಟಿ ಮಾಡಲು ಅಲತಗೆಯ ಖಡಿ ಮಷಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಹೋಗಿದ್ದಾರೆ. ಕುಡಿದ ನಶೆಯಲ್ಲಿ ನೀರಿಗೆ ಇಳಿದು ಆಳ ನೋಡುತ್ತೇನೆ ಎಂದು ದೂರ ಹೋದ ಸತೀಶ ಮೇಲೆ ಬಂದಿಲ್ಲ.
ಬಹಳ ಸಮಯದವರೆಗೆ ನೋಡಿ ಗಾಬರಿಗೊಂಡ ಇಬ್ಬರು ಸ್ನೇಹಿತರು ತಕ್ಷಣ ಅಲ್ಲಿದ್ದ ಸಂಬಂಧಿಕರಿಗೆ ಹಾಗೂ ಕಾಕತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಕತಿ ಠಾಣೆ ಪಿಐ ಗುರುನಾಥ ಐ ಎಸ್, ಪಿಎಸ್ಐ ಮಂಜುನಾಥ ಹುಲಕುಂದ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ದೌಡಾಯಿಸಿದ್ದಾರೆ. ನಂತರ ಅಗ್ನಿಶಾಮಕ ಹಾಗೂ SDRF ಸಿಬ್ಬಂದಿಗಳನ್ನು ಕರೆಸಿ 8 ಗಂಟೆಯವರೆಗೆ ಜಂಟಿ ಶೋಧ ಕಾರ್ಯ ಕೈಗೊಂಡಿದ್ದರು. ಕತ್ತಲಾಗಿದ್ದರಿಂದ ಶೋಧ ಕಾರ್ಯಚರಣೆ ನಾಳೆ ಬೆಳಗ್ಗೆ ಮುಂದುವರಿಯಲಿದೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೀಪಾವಳಿ ಹಾಗೂ ಗ್ರಹಣದ ದಿನ ಪಾರ್ಟಿ ಮಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡನಾಽ ಎಂದು ಗ್ರಾಮಸ್ಥರು ಮಾತನಾಡುವಂತಾಗಿದೆ.
ಪ್ರತಿವರ್ಷ ಒಂದೆರಡು ಸಾವು..!
ಇಲ್ಲಿನ ಖಡಿಮಷಿನ್ ಕಲ್ಲಿನ ಕ್ವಾರಿಯಲ್ಲಿ ಪ್ರತಿ ವರ್ಷ ಒಂದೆರಡು ಸಾವುಗಳು ಸಂಭವಿಸುತ್ತಿವೆ. ಪಾರ್ಟಿ ಮಾಡಲು ಬಂದು ನೀರಿಗೆ ಈಜಲು ಹೋಗಿ, ಜಾನುವಾರ ಮೈ ತೊಳೆಯುವಾಗ ಅಥವಾ ಮನನೊಂದು ಆತ್ಮಹತ್ಯೆಮಾಡಿಕೊಂಡು ವರ್ಷದಲ್ಲಿ ಒಂದೆರಡು ಜೀವಗಳನ್ನು ಈ ಕಲ್ಲಿನ ಕ್ವಾರಿ ತೆಗೆದುಕೊಳ್ಳುತ್ತಿದೆ. ಮುಂದೆ ಇಂತಹ ಅನಾಹುತಗಳು ನಡೆಯದಂತೆ ಇಲ್ಲಿನ ಜನಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಜನ ಕಾದು ನೋಡುತ್ತಿದ್ದಾರೆ.