ಬೆಳಗಾವಿ : ಸಾವು ಯಾರಿಗೆ ಹೇಗೆ ಎಲ್ಲಿ ಬರುತ್ತದೆ ಎಂದು ಹೇಳುವುದೇ ಕಷ್ಟ. ನಿಮಿಷದ ಅವಧಿಯಲ್ಲಿ ಕೆಲವರಿಗೆ ಸಾವು ಬರೆದಿರುತ್ತದೆ. ವಿಧಿ ಲೀಲೆಯನ್ನು ಅರ್ಥೈಸಿಕೊಳ್ಳುವುದೇ ಕಠಿಣ. ಇಂದು ನಡೆದು ಹೋದ ಘಟನೆಯಿಂದ ನಾಗರಿಕರು ಈ ರೀತಿಯಾಗಿ ಮಾತನಾಡಿಕೊಂಡರು.
ಸವದತ್ತಿ ತಾಲೂಕು ಚಚಡಿ ಗ್ರಾಮದಲ್ಲಿ ಸೋಮವಾರ ನಡೆದ ಸಂಗಮೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಶಿವಾನಂದ ರಾಜಕುಮಾರ ಸಾವಳಗಿ (13 ವರ್ಷ) ಮೃತಪಟ್ಟ ಬಾಲಕ. ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಗಮೇಶ್ವರ ದೇವರ ರಥೋತ್ಸವಕ್ಕೆ ಸಿದ್ಧತೆ ನಡೆದಿತ್ತು. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲಿನ 5 ಕೆಜಿ ಭಾರವಿರುವ ಬೆಳ್ಳಿಯ ನವಿಲು ಪ್ರತಿಷ್ಠಾಪನೆ ಮಾಡಲಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಜಾತ್ರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬೆಳ್ಳಿಯ ನವಿಲನ್ನು ಇಡಲಾಗಿತ್ತು. ರಥ ಸಂಚರಿಸಬೇಕಾದ ರಸ್ತೆ ಸಂಪೂರ್ಣ ತಗ್ಗು ದಿಣ್ಣೆಗಳಿಂದ ಕೂಡಿದೆ. ದೇವಸ್ಥಾನದಿಂದ ರಥವನ್ನು ತುಸು ದೂರ ಎಳೆದುಕೊಂಡು ಹೋದ ಬಳಿಕ ರಥದ ಚಕ್ರಗಳು ತಗ್ಗಿನಲ್ಲಿ ಸಿಲುಕಿವೆ. ಜನ ಜೋರಾಗಿ ರಥ ಎಳೆದಾಗ ಹೊರಳಾಡಿದೆ. ಆಗ ರಥದ ಮೇಲಿನ ಬೆಳ್ಳಿಯ ನವಿಲು ಕಿತ್ತು ಬಂದು ಕೆಳಗಡೆ ಇದ್ದ ಬಾಲಕನ ಮೇಲೆ ಬಿದ್ದಿದೆ. ಅದು ಏಕಾಏಕಿ ಬಾಲಕನ ತಲೆಯ ಮೇಲೆ ಬಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ. ತಕ್ಷಣ ರಥೋತ್ಸವವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಚಚಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವರ ಜಾತ್ರೆ ಪ್ರಯುಕ್ತ ಸೋಮವಾರ ಸಂಜೆ 4 ಗಂಟೆಗೆ ಮಹಾ ರಥೋತ್ಸವ ಏರ್ಪಡಾಗಿತ್ತು. ಈ ಸಲ ಗ್ರಾಮದ ಯುವಕರು ಹಣ ಕೂಡಿಸಿ ರಥದ ಕಳಸದ ಮೇಲೆ ಬೆಳ್ಳಿಯ ನವಿಲು ಮಾಡಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.