ಬೆಳಗಾವಿ: ಅಸ್ಪೃಶ್ಯತೆ ನಿವಾರಣೆ ಮತ್ತು ಸಮಾಜ ಸುಧಾರಣೆಯಲ್ಲಿ ನಾರಾಯಣ ಗುರುಗಳ ಸೇವೆ ಎಲ್ಲಾ ಕಾಲಕ್ಕೂ ಅನುಕರಣೀಯ. ಅವರ ಕಾರ್ಯ ಅನುಪಮ ಎಂದು ನಿಪ್ಪಾಣಿ ಓಂ ಶಕ್ತಿ ದೇವಸ್ಥಾನ ಪೀಠದ ಮಹಾಕಾಳಿ ಮಹಾಸಂಸ್ಥಾನದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕುಮಾರಗಂಧರ್ವ ರಂಗ ಮಂದಿರದಲ್ಲಿ ರವಿವಾರ ಬಿಲ್ಲವರ ಅಸೋಸಿಯೇಷನ್ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾರಾಯಣ ಗುರುಗಳು ಅಪ್ರತಿಮ ಸಮಾಜ ಸುಧಾರಣೆಯ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆ ನಿವಾರಿಸಿದ್ದರು. ಮಹಿಳೆಯರ ಶೋಷಣೆಯ ದುಷ್ಟ ಪದ್ದತಿಯನ್ನು ನಿಲ್ಲಿಸಿದ್ದರು. ಲೋಪ ದೋಷಗಳು ಇರದ ಜನಪರ ಕಾಳಜಿ ಅವರಿಗಿತ್ತು. ಅಪ್ರತಿಮವಾದ ಸಮಾಜ ಸುಧಾರಕ ಅವರಾಗಿದ್ದರು ಎಂದು ಬಣ್ಣಿಸಿದರು.
ನಾರಾಯಣ ಗುರುಗಳ ಚಿಂತನೆ ಮತ್ತು ಪ್ರಸ್ತುತತೆ ವಿಷಯವಾಗಿ ಮಲ್ಲಮ್ಮ ಯಾತಗಲ್ ಉಪನ್ಯಾಸ ನೀಡಿ, ದೇವರ ನಾಡು ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ಹೋರಾಟ ಮಾಡದೆ ಇಡೀ ಸಮಾಜದಲ್ಲಿರುವ ಸಂಕುಚಿತ ಮನೋಭಾವದ ವಿರುದ್ಧ ಹೋರಾಡಿದ್ದರು. ಪ್ರಾಚೀನ ಮೌಲ್ಯಗಳನ್ನು, ಸತ್ಯವನ್ನು ಅರಚಿಕೊಂಡು ಹೋಗಿ ತಪಸ್ಸು ಮಾಡಿ ಜೀವನದಲ್ಲಿ ಸಾಧನೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ನಾರಾಯಣ ಗುರುಗಳಂತಹ ಮಹಾನ್ ಸಾಧಕ ಇನ್ನೊಬ್ಬರು ಸಿಗುವುದೇ ದುರ್ಲಭ. ಅವರಲ್ಲಿ ಅಪಾರ ಗುಣ ಹಾಗೂ ಸುಧಾರಣೆಗಳು ಇದ್ದವು. ಜಾತಿಭೇದ ಅಸ್ಪ್ರಶತೆ ತಾಂಡವಾಡುತ್ತಿದ್ದ ಕಾಲದಲ್ಲಿ ನಾರಾಯಣ ಗುರುಗಳು ಅವತಾರ ಪುರುಷರಂತೆ ಜನಿಸಿ ಸಮಾಜದಲ್ಲಿ ಮೇಲು-ಕೀಳು ಎನ್ನುವುದನ್ನು ತೊಲಗಿಸಿದ್ದರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ, ಸುಧೀರ್ ಕುಮಾರ್ ಸಾಲ್ಯಾನ್, ವಿಜಯ ಸಾಲ್ಯಾನ್, ಬಸವರಾಜ ಈಳಿಗ, ಸುಜನ್ ಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 94 ರಷ್ಟು ಅಂಕ ಪಡೆದ ಪ್ರಜನ್ ಪೂಜಾರಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 91 ರಷ್ಟು ಅಂಕ ಪಡೆದ ತ್ರಿಶಾ ಶೇಖರ ಪೂಜಾರಿ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 92 ರಷ್ಟು ಅಂಕ ಪಡೆದ ಶ್ರೇಯಸ್ ಪ್ರಭಾಕರ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಭಜನೆ ಮತ್ತು ಗುರು ಪೂಜಾ ಕಾರ್ಯಕ್ರಮ ನಡೆಯಿತು. ಸ್ವಾತಿ ಮತ್ತು ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನೆರವೇರಿತು.
ವಿವಿಧ ಮಹಿಳಾ ಮಂಡಳಗಳ ಸದಸ್ಯೆಯರು, ಬಿಲ್ಲವರ ಅಸೋಸಿಯೇಷನ್ ಸದಸ್ಯರು, ಬಿಲ್ಲವರ ಅಸೋಸಿಯೇಷನ್ ಯುವ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.