ಮಂತ್ರಾಲಯ : ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರಕಿತು. ಮಂತ್ರಾಲಯದ ಶ್ರೀರಾಯರ ಮಠದಲ್ಲಿ ಆರಾಧನೆ ನಿಮಿತ್ತ ಆಯೋಜಿಸಿರುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಭಾನುವಾರ ಸಂಜೆ ಚಾಲನೆ ನೀಡಿದರು.
ಸಪ್ತರಾತ್ರೋತ್ಸವದ ಮೊದಲ ದಿನ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಶ್ರೀ ಮಠದ ಮುಂಭಾಗದಲ್ಲಿ ಪೀಠಾಧಿಪತಿಗಳು ಶ್ರೀಮಠದ ಸಂಪ್ರದಾಯಗಳ ಅನುಸಾರಧ್ವಜಾರೋಹಣ, ಗೋಪೂಜೆ, ಅಶ್ವಪೂಜೆ, ಧ್ವಜಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ, ಪ್ರಭಾಉತ್ಸವ, ಧಾನ್ನೋತ್ಸವಗಳನ್ನು ನೆರವೇರಿಸಿದರು.
ಶ್ರೀಮಠದ ಮುಂಭಾಗದ ಆವರಣದಲ್ಲಿರುವ ಯೋಗೀಂದ್ರ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದ ಈ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶವನ್ನು ನೀಡಿದ ಶ್ರೀಗಳು, ಶ್ರೀ ಗುರುರಾಯರ 353ನೇ ಆರಾಧನಾ ಮಹೋತ್ಸವ ನಿಮಿತ್ತವಾಗಿ
ಶ್ರೀಮಠದಲ್ಲಿ ಸಪ್ತರಾತ್ರೋತ್ಸಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದು, ಇಂದಿನಿಂದ ಏಳು ದಿನಗಳ ಕಾಲ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇಶ- ವಿದೇಶಗಳಿಂದ ಆಗಮಿಸುವ ರಾಯರ ಭಕ್ತರಿಗೆ ಶ್ರೀಮಠ ದಿಂದ ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಭಕ್ತರು ನಿರ್ಭೀತಿಯಾಗಿ ಸುಕ್ಷೇತ್ರಕ್ಕೆ ಆಗಮಿಸಿ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದರು.
ಆರಾಧನಾ ಮಹೋತ್ಸವ ನಿಮಿತ್ತ ಮಂತ್ರಾಲಯವು ವಿಶೇಷ ಹೂವು, ದೀಪಾಲಂಕಾರದಿಂದ ಕಂಗೊಳಿಸಿತು.