ಪ್ರೊ. ಬಿ.ಎಸ್. ಗವಿಮಠ ಅವರು ಕೆಎಲ್ ಇ ಸಂಸ್ಥೆಯ ಇತಿಹಾಸ ಹುಡುಕಿ ಬರೆದು ಕೆಎಲ್ ಇ ಸಂಸ್ಥೆಗೆ ಗೌರವ ತಂದುಕೊಟ್ಟಿದ್ದಾರೆ. ಫ.ಗು.ಹಳಕಟ್ಟಿ ಅವರು ಇರದಿದ್ದರೆ. ಬಸವಣ್ಣನವರ ಪರಿಚಯ, ಅವರ ವಚನಗಳು ನಮಗೆ ಸಿಗುತ್ತಿರಲಿಲ್ಲ. ಅದೇ ರೀತಿ ಬಿ.ಎಸ್. ಗವಿಮಠ ಅವರು ಇರದಿದ್ದರೆ ಕೆಎಲ್ ಇ ಸಂಸ್ಥೆಯ ಇತಿಹಾಸ ಈ ದೇಶಕ್ಕೆ ತಿಳಿಯುತ್ತಿರಲಿಲ್ಲ. ಬಿ.ಎಸ್. ಗವಿಮಠ ಅವರು, ಬೆಳಗಾವಿಗೆ ಸಾಹಿತ್ಯಿಕ- ಸಾಂಸ್ಕೃತಿಕ- ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇತರರನ್ನು ಬೆಳೆಸುವ ಮನಸ್ಸು, ಹೃದಯ ಗವಿಮಠ ಅವರಲ್ಲಿದೆ.– ಪತ್ರಕರ್ತ ಡಾ. ಸರಜು ಕಾಟ್ಕರ್
ಜನ ಜೀವಾಳ ಜಾಲ : ಬೆಳಗಾವಿ :ಸಾಹಿತಿ, ನಿವೃತ್ತ ಪ್ರಾಚಾರ್ಯ, ಹೋರಾಟಗಾರ, ಸಂಘಟಕ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಬಿ.ಎಸ್. ಗವಿಮಠ ಬೆಳಗಾವಿ ಪರಿಸರದ ಒಬ್ಬ ಅಪ್ಪಟ ಕನ್ನಡಿಗನಾಗಿ ಸಾಹಿತ್ಯ ಸೇವೆಯನ್ನು ಮಾಡಿದವರು. ಜತೆಗೆ ತಮ್ಮ ಹರಿತವಾದ ಲೇಖನಿಯಿಂದ ಕನ್ನಡ ಕಟ್ಟುವ ಕೆಲಸವನ್ನು ಮಾಡಿದವರು. ಪಾಟೀಲ ಪುಟ್ಟಪ್ಪ (ಪಾಪು)ನಂತರ ಕನ್ನಡದ ಬಗ್ಗೆ ಅತ್ಯಂತ ಗಟ್ಟಿಯಾಗಿ ಮಾತನಾಡುವ ಧ್ವನಿಯಾಗಿದ್ದಾರೆ ಎಂದು ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಹೇಳಿದರು.
ರವಿವಾರ ಸಂಜೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತ್ಯ ಭೂಷಣ ಬಿ.ಎಸ್. ಗವಿಮಠ ಸ್ನೇಹಿತರು ವಿದ್ಯಾರ್ಥಿಗಳು ಹಮ್ಮಿಕೊಂಡ ಪ್ರಾ. ಬಿ.ಎಸ್. ಗವಿಮಠರ ಸಮಗ್ರ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಗವಿಮಠ ಅವರ ಸಾಹಿತ್ಯ ಸೇವೆ ಅನುಪಮವಾಗಿದೆ. ಅವರೊಬ್ಬ ಅತ್ಯುತ್ತಮ ಸಂಘಟಕ, ಮೇಧಾವಿ, ಬಹುಶ್ರುತ ವ್ಯಕ್ತಿತ್ವ ಹೊಂದಿದವರು. ಬೆಳಗಾವಿಗಾಗಿ ಸದಾ ತುಡಿತ ಹೊಂದಿರುವ ಅವರೊಬ್ಬ ಶ್ರೇಷ್ಠ ಜ್ಞಾನ ಸಂಪನ್ನ ವ್ಯಕ್ತಿ ಎಂದು ಕೊಂಡಾಡಿದರು.
ಬೆಳಗಾವಿಯ ಹಿಂದಿನ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕ ಎಂ.ಜಿ.ಹಿರೇಮಠ ಮಾತನಾಡಿ, ನಾನು ಗವಿಮಠ ಅವರ ಶಿಷ್ಯ. ಬೆಳಗಾವಿಯ ಜಿ.ಎ. ಪ್ರೌಢಶಾಲೆಯಲ್ಲಿ 1977,1978 ರಲ್ಲಿ ನಾವು ಓದುವಾಗ ಗವಿಮಠ ಅವರು ಕನ್ನಡ ಪಾಠ ಮಾಡುತ್ತಿದ್ದರು. ಅವರ ಕನ್ನಡ ಪಾಠದ ಶೈಲಿ ಅತ್ಯಂತ ಆಕರ್ಷಣೀಯವಾಗಿತ್ತು. ಅದೇ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಬಭ್ರುವಾಹನ ಚಲನಚಿತ್ರ ಬೆಳಗಾವಿಗೆ ಬಂದಿತ್ತು. ಬಭ್ರುವಾಹನ ಚಿತ್ರದಲ್ಲಿ ಬರುವ ಅರ್ಜುನ-ಬಭ್ರುವಾಹನ
ಕಾಳಗದ ಸನ್ನಿವೇಶವನ್ನು ಅತ್ಯಂತ ಸ್ವಾರಸ್ಯಕರವಾಗಿ ಅವರು ವರ್ಣಿಸಿರುವುದು ಇಂದಿಗೂ ನಮ್ಮ ಮನ ಪಟಲದಲ್ಲಿ ಉಳಿದುಕೊಂಡಿದೆ. ಅಷ್ಟೊಂದು ಶ್ರೇಷ್ಠವಾದ ಶೈಲಿಯಲ್ಲಿ ಅವರು ಬೋಧನಕ್ರಮವನ್ನು ಅಳವಡಿಸಿಕೊಂಡಿದ್ದರು ಎಂದು ತಮ್ಮ ಗುರುಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ನಾನು ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದೆ. ಆ ಸಂದರ್ಭದಲ್ಲಿ ಕೆ.ಎಲ್. ಇ ಸಂಸ್ಥೆ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಅವರನ್ನು ಹೊತ್ತು ಗೊತ್ತಿಲ್ಲದೆ ಸಂಪರ್ಕಿಸುತ್ತಿದ್ದೆ. ಅವರು ಆ ಸಂದರ್ಭದಲ್ಲಿ ನಮಗೆ ಸಮಗ್ರ ಮಾಹಿತಿ ನೀಡುತ್ತಿದ್ದರು. ಯಾವುದೇ ವಿಷಯ ಆಗಿರಲಿ. ಆ ಬಗ್ಗೆ ಅವರು ಆಳವಾದ ಜ್ಞಾನವನ್ನು ಹೊಂದಿದ್ದರು.
ನಾನು ಓದುತ್ತಿದ್ದಾಗ ಬಸಾಪುರ ಶಾಲೆಯ ಶಿಕ್ಷಕರೊಬ್ಬರು ಒಂದು ಸಲ ನನ್ನ ಬಳಿ ತಂದೆಯವರಿಗೆ ಕೊಡುವಂತೆ ಒಂದು ಪತ್ರ ಕಳಿಸಿಕೊಟ್ಟಿದ್ದರು. ಈ ಹುಡುಗನಿಗೆ (ನನಗೆ) ಶಾಲೆಯನ್ನು ಬಿಡಿಸಬೇಡಿ. ಈತ ಮುಂದೆ ಬಹುದೊಡ್ಡ ವ್ಯಕ್ತಿ ಆಗುತ್ತಾನೆ ಎಂದು ಬರೆದು ಕೊಟ್ಟಿದ್ದರು. ಅದೇ ರೀತಿ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲೂ ಗವಿಮಠ ಅವರೊಂದಿಗೆ ಇತರ ಶಿಕ್ಷಕರು ನನಗೆ ಅಪಾರವಾದ ಪ್ರೋತ್ಸಾಹ ನೀಡುತ್ತಿದ್ದರು ಎಂದು ತಮ್ಮ ಶಾಲಾ ದಿನದ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡ ಹಿರೇಮಠ ಅವರು, ಇಂತಹ ಗುರುಗಳು ನಮಗೆ ಬೋಧಿಸಿದ್ದರಿಂದಲೇ ನಾನು ಇಂದು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದು ಹೇಳಿದರು.
ತಮ್ಮ ಗುರುಗಳಾಗಿರುವ ಗವಿಮಠ ಅವರು ಸಾಹಿತ್ಯ ಲೋಕಕ್ಕೆ ಇನ್ನೂ ಬಹಳ ಕೊಡುಗೆ ನೀಡಬೇಕು. ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು. ನಾನು ಎರಡು ವರ್ಷಗಳ ಕಾಲ ಬೆಳಗಾವಿಯ ಜಿಲ್ಲಾಧಿಕಾರಿಯಾಗಿದ್ದೆ. ನನ್ನ ತವರು ಜಿಲ್ಲೆಯಾಗಿರುವ ಕಾರಣಕ್ಕೆ ಬಹಳ ನಿಕಟವಾದ ಸಂಬಂಧವನ್ನು ಇಟ್ಟುಕೊಂಡಿರುವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಹೋರಾಟಗಾರ ಡಾ ಎಚ್.ಬಿ. ರಾಜಶೇಖರ ಮಾತನಾಡಿ, ನಮ್ಮ ಬೆಳಗಾವಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಇಚ್ಛಾಶಕ್ತಿ ಕೊರತೆ ಎದುರಿಸುತ್ತಿದ್ದೇವೆ. ಇದರಿಂದಾಗಿ ಬೆಳಗಾವಿಗೆ ನ್ಯಾಯಯುತವಾಗಿ ಬರಬೇಕಿದ್ದ ಪ್ರತಿಷ್ಠಿತ ಐಐಟಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಹುಬ್ಬಳ್ಳಿ-ಧಾರವಾಡಕ್ಕೆ ಹೋಗುತ್ತಿದೆ. ಸಾಹಿತ್ಯಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಬೆಳಗಾವಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಇನ್ನಷ್ಟು ಸಂಘಟಿತರಾಗಿ ಹೋರಾಡಿ ನಮಗೆ ಪಡೆಯಬೇಕಾಗಿರುವ ಸೌಲಭ್ಯವನ್ನು ಪಡೆಯಬೇಕು ಎಂದು ತಿಳಿಸಿದರು.
ಬಿ.ಎಸ್. ಗವಿಮಠ ಅವರ ಸಾಹಿತ್ಯ ಸೇವೆ ಮೌಲಿಕವಾಗಿದೆ. ಅವರೊಬ್ಬ ಅಪ್ಪಟ ಕನ್ನಡಿಗರು. ಕೆ ಎಲ್ ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಶ್ರಮ ಅಪಾರವಾಗಿದೆ. ಅವರಲ್ಲಿರುವ ಕನ್ನಡದ ಬಗೆಗಿನ ತುಡಿತ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಮಾತನಾಡಿ, ಐವತ್ತು ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ನಾವು ಗವಿಮಠ ಅವರೊಂದಿಗೆ ಸ್ನೇಹ-ಸಂಬಂಧ ಹೊಂದಿದ್ದೇವೆ. ಅವರ ಜೊತೆಗೆ ಕೆಎಲ್ ಇ ಕರುಳುಬಳ್ಳಿ ಸಂಬಂಧ ಹೊಂದಿದವರು ನಾವು ಎನ್ನಲು ಬಹಳ ಸಂತಸವಾಗುತ್ತದೆ. ಕೆಎಲ್ ಇ ವಿಶ್ವಸನೀಯ ವ್ಯಕ್ತಿಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ನಿಕಟವರ್ತಿಯಾಗಿ, ಸ್ನೇಹಿತರಾಗಿ ಗವಿಮಠ ಅವರು ಗುರುತಿಸಿಕೊಂಡವರು.
ಕೆಎಲ್ ಇ ಸಂಸ್ಥೆ ಹಾಗೂ ಡಾ. ಪ್ರಭಾಕರ ಕೋರೆ ಅವರ ಬಗ್ಗೆ ಗವಿಮಠ ಅವರಿಗೆ ಮೊದಲಿನಿಂದಲೂ ಬಹಳ-ಪ್ರೀತಿ ವಿಶ್ವಾಸ. ಕೆಎಲ್ ಇ ಸಂಸ್ಥೆಯ ಬಗ್ಗೆ ಗೌರವ ಈ ಕಾರಣಕ್ಕೆ ಆ ಸಂಸ್ಥೆಯ ಏಳಿಗೆಗೆ ಸದಾ ಶ್ರಮಿಸುತ್ತಾ ಬಂದಿದ್ದಾರೆ. ಜತೆಗೆ ಸಾರ್ವಜನಿಕ ಜೀವನದಲ್ಲಿಯೂ ಗವಿಮಠರು ತಮ್ಮ ನೇರ, ನಿರ್ಭಿತ, ವ್ಯಕ್ತಿತ್ವದಿಂದ ಜನರ ಪ್ರೀತಿಗೆ ಪಾತ್ರರಾದವರು.
ದಕ್ಷ ಆಡಳಿತಗಾರ, ಸಮರ್ಥ ಸಂಘಟಕರಾಗಿ ಶ್ರೇಷ್ಠ ಲೇಖನಿ ಮೂಲಕ ಹೋರಾಟಗಾರರಾಗಿ
ತೊಡಗಿಕೊಂಡಿರುವ ಅವರು
ಕೆಎಲ್ ಇಯ ಬೆಳವಣಿಗೆಯಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ಆ ಸಂಸ್ಥೆಯ ಆಗುಹೋಗುಗಳ ಜತೆಗಿದ್ದಾರೆ. ಎಪ್ಪತ್ತರ ದಶಕದಲ್ಲಿ ಅಂದಿನ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಕನ್ನಡದ ಬಗ್ಗೆ ನಾವೆಲ್ಲ ಜತೆಜತೆಯಾಗಿ ಹೋರಾಟ ನಡೆಸುತ್ತಾ ಬಂದವರು. ಒಟ್ಟಾರೆಯಾಗಿ ಇಡೀ ಸಮಾಜಕ್ಕೆ
ಗವಿಮಠರು ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ, ಬದ್ದತೆಯ ಹೋರಾಟಗಾರಾಗಿ ಗುರುತಿಸಲ್ಪಡುವ ವ್ಯಕ್ತಿ. ಅದೇ ರೀತಿ ಅವರು ಸಮಾಜಕ್ಕೆ
ಸ್ನೇಹಜೀವಿಯೂ ಹೌದು. ಅವರು ಹಾಸ್ಯಪ್ರಜ್ಞೆಯುಳ್ಳವರು. ಅವರ ಹುರುಪು, ಹುಮ್ಮಸ್ಸು ಅನುಕರಣೀಯ ಎಂದು ತಮ್ಮ
ತಮ್ಮ ಬಹುಕಾಲದ ಒಡನಾಡಿ ಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಬಿ.ಎಸ್. ಗವಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶುಭಂ ಮಂಗಸೂಳಿ ಪ್ರಾರ್ಥಿಸಿದರು. ಸಿ.ಜಿ.ಮಠಪತಿ ಸ್ವಾಗತಿಸಿದರು. ಡಾ. ಮಹೇಶ ಗುರನಗೌಡ್ರ ನಿರೂಪಿಸಿ ವಂದಿಸಿದರು.ನಂತರ ಬಿ.ಎಸ್. ಗವಿಮಠ ಅವರ ಸಾಹಿತ್ಯ ಸೇವೆಯ ಕುರಿತು ವಿಚಾರ ಸಂಕಿರಣ ನಡೆಯಿತು.