ಪ್ಯಾರಿಸ್: ಭಾರತ ಪುರುಷರ ತಂಡ ಒಲಿಂಪಿಕ್ ಕ್ರೀಡೆಗಳ
ಹಾಕಿಯಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕ ಗೆದ್ದುಕೊಂಡಿತು.
ಭಾರತ 41 ವರ್ಷಗಳ ನಂತರ, 2020ರ ಟೋಕಿಯೊ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿತ್ತು. ಕ್ರೀಡೆಗಳಿಗೆ ಹೋಗುವ ಮೊದಲು ಅಂಥ ಲಯದಲ್ಲಿ ಇಲ್ಲದಿದ್ದರೂ ಪ್ಯಾರಿಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿತು.
ಭಾರತ 52 ವರ್ಷಗಳ ನಂತರ ಸತತ ಕ್ರೀಡೆಗಳಲ್ಲಿ ಕಂಚಿನ ಪದಕ ಪಡೆದಿದೆ. ಈ ಹಿಂದೆ 1968ರ ಮೆಕ್ಸಿಕೊ ಮತ್ತು 1972ರ ಮ್ಯೂನಿಕ್ ಕ್ರೀಡೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.
ಗುರುವಾರ ಮೂರನೇ ಸ್ಥಾನಕ್ಕಾಗಿ ನಡೆದ ‘ಪ್ಲೇ ಆಫ್’ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಹರ್ಮನ್ಪ್ರೀತ್ ಬಳಗ, ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಅರ್ಹ ರೀತಿಯಲ್ಲೇ ವಿದಾಯದ ಉಡುಗೋರೆ ನೀಡಿತು.
ಸ್ಕೋರ್ ಸಮ ಮಾಡಲು ಸ್ಪೇನ್ ತಂಡ ಕೊನೆಯ ಕೆಲವು ನಿಮಿಷ ಭಾರತದ ಗೋಲಿನ ಆವರಣದಲ್ಲಿ ಸತತ ದಾಳಿಗಳನ್ನು ನಡೆಸಿ ಒತ್ತಡ ಹೇರಿತು. ಪೆನಾಲ್ಟಿ ಕಾರ್ನ್ರಗಳನ್ನೂ ಪಡೆಯಿತು. ಆದರೆ ಭಾರತದ ರಕ್ಷಣಾ ಪಡೆ ಕಂಗೆಡದೇ ಅವುಗಳನ್ನು ತಡೆದು ಆತಂಕ ನಿವಾರಿಸಿತು.