ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮರ ಹೆಸರು ಇಡಬೇಕು ಎನ್ನುವುದು ಇಲ್ಲಿಯ ಹೋರಾಟಗಾರರ ಹಳೆಯ ಬೇಡಿಕೆ.
ರಾಜ್ಯದ ಅತಿ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಿರುವ ಬೆಳಗಾವಿ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರು ಇಡುವಂತೆ ರಾಜ್ಯ ಸರಕಾರ ಇದೀಗ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ರವಾನಿಸಿದೆ.
ಬೆಳಗಾವಿ, ವಿಜಯಪುರ, ಹುಬ್ಬಳ್ಳಿ, ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಕಿತ್ತೂರು ರಾಣಿ ಚನ್ನಮ್ಮ ವಿಮಾನ ನಿಲ್ದಾಣ, ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ ಮತ್ತು ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ (ಕುವೆಂಪು) ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷ ನಡೆದ ವಿಧಾನ ಮಂಡಲದ ಅಧಿವೇಶನದಲ್ಲೂ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.