ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿವಸಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ಆಗುತ್ತಿರುವ ಗುಡ್ಡಕುಸಿತ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಅಂಕೋಲಾ-ಕಾರವಾರ ಮತ್ತು ಶಿರಸಿ-ಕುಮಟಾ ನಡುವೆ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಗಿ ವಾಹನಗಳು ಹಾಗೂ ವಾಸ್ತವ್ಯದ ಮನೆ ನದಿಯ ಪಾಲಾಗಿವೆ. ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಸಂಭವಿಸಿವೆ. ಅಲ್ಲದೇ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿವೆ. ಮಣ್ಣು ತೆರವು ಕಾರ್ಯ ಮುಂದುವರಿದಿದ್ದು, ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.
೧. ಯಲ್ಲಾಪುರದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಬಾಳೆಗುಳಿ ಕ್ರಾಸದಿಂದ-ಹೊಸ ಕಂಬಿ ಹಿಲ್ಲೂರು- ಮಾದನಗೇರಿ ಕ್ರಾಸ್-ಕುಮಟಾ ಮುಖಾಂತರ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ.
೨. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ- ಮಾದನಗೇರಿ ಕ್ರಾಸ್ದಿಂದ – ಹಿಲ್ಲೂರು- ಹೊಸಕಂಬಿ ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.
ಶಿರಸಿ-ಕುಮಟಾ ಸಂಚಾರಕ್ಕೂ ಪರ್ಯಾಯ ಮಾರ್ಗ :
ಶಿರಸಿ-ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಅತಿಯಾಗಿ ಮಳೆ ಬೀಳುತ್ತಿರುವುದರಿಂದ ಮಣ್ಣನ್ನು ತೆರವು ಮಾಡಿದಷ್ಟು ಮತ್ತೆ ಗುಡ್ಡ ಕುಸಿಯತ್ತಿದೆ. ಮಳೆ ಕಡಿಮೆಯಾಗದೆ ಇದ್ದಲ್ಲಿ ಮತ್ತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ, ಕುಮಟಾ-ಶಿರಸಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.
೧. ಶಿರಸಿಯಿಂದ ಕುಮಟಾಕ್ಕೆ ಹೋಗುವ ವಾಹನಗಳಿಗೆ ಯಲ್ಲಾಮರ-ಹೊಸಕಂಬಿ-ಹಿಲ್ಲೂರು ಮಾದನಗೇರಿ ಕ್ರಾಸ್ದಿಂದ ಕುಮಟಾಕ್ಕೆ ಸಂಚರಿಸಬಹುದಾಗಿದೆ.
೨. ಶಿರಸಿಯಿಂದ ಕಾರವಾರಕ್ಕೆ ಹೋಗುವ ವಾಹನಗಳಿಗೆ ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.
೩. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಕುಮಟಾ- ಮಾದನಗೇರಿ ಕ್ರಾಸ್ದಿಂದ ಹಿಲ್ಲೂರು-ಹೊಸಕಂಬಿ ಯಲ್ಲಾಪುರ ಮುಖಾಂತರ ಶಿರಸಿಗೆ ಪ್ರಯಾಣಿಸಬಹುದಾಗಿದೆ.