ಬೆಳಗಾವಿ: ಇಡೀ ದೇಶದಲ್ಲಿ ನೀಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಬೆಳಗಾವಿಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿ ಯಾರು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಾರೋ ಅಂಥವರನ್ನು ಗುರಿಯಾಗಿಸಿ ನಿಮಗೆ ಮೆಡಿಕಲ್ ಸೇರಿದಂತೆ ಇತರ ಸೀಟ್ ಕೊಡಿಸುತ್ತೇನೆ ಎಂದು ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಮಾಸ್ಟರ್ ಮೈಂಡ್ ಅನ್ನು ಬೆಳಗಾವಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಹೈದರಾಬಾದ್ ನವನಾದ ಅರವಿಂದ್ ಕುಮಾರ್ ಬಂಧಿತ ವ್ಯಕ್ತಿ. ಬೆಳಗಾವಿಯಲ್ಲಿ 1,30,41,884 ₹ ಆತ ವಿವಿಧ ಆಕಾಂಕ್ಷಿಗಳಿಂದ ಪಡೆದುಕೊಂಡಿದ್ದ ಎನ್ನುವುದು ಪೋಲಿಸ್ ತನಿಖೆ ವೇಳೆ ಬಯಲಾಗಿದೆ. ನೀಟ್ ಪರೀಕ್ಷೆಯಲ್ಲಿ ಯಾರೂ ಕಡಿಮೆ ಅಂಕ ಪಡೆದುಕೊಂಡಿರುತ್ತಾರೋ ಅವರನ್ನು ಬೆಳಗಾವಿಯಲ್ಲಿ ಸಂಪರ್ಕಿಸುತ್ತಿದ್ದ. ನನಗೆ ಬಹಳಷ್ಟು ಪ್ರಭಾವಿಗಳ ಪರಿಚಯವಿದೆ, ನಿಮಗೆ ಸೀಟ್ ಕೊಡಿಸುವುದಾಗಿ ಹತ್ತಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ. ಕೊನೆಗೂ ಬೆಳಗಾವಿ ಪೊಲೀಸರು ಮುಂಬೈಯಲ್ಲಿ ಈತ ಮತ್ತೊಂದು ಕೋಚಿಂಗ್ ಸೆಂಟರ್ ಆರಂಭಿಸುವ ಮುನ್ನವೇ ತಮ್ಮ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ಡಿಸಿಪಿ ರೋಹನ್ ಜಗದೀಶ್ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಪಡೆದುಕೊಂಡಿದ್ದ ಈತ ಸಾಮಾನ್ಯ ವ್ಯಕ್ತಿಯಲ್ಲ. ಎಂಬಿಎ ನಲ್ಲಿ ಡಿಸ್ಟಿಂಗ್ಶನ್ ಪಡೆದುಕೊಂಡಿದ್ದ. ಈ ಹಿಂದೆ ಹೈದರಾಬಾದ್ ನಲ್ಲಿ 2016ರಲ್ಲಿ ಒಮ್ಮೆ ಪೊಲೀಸ್ ಬಲೆಗೆ ಬಿದ್ದಿದ್ದ. ಆದರೆ, ತನ್ನ ಚಾಳಿ ಬಿಡದೆ ಬೆಳಗಾವಿ, ಭೋಪಾಲ್, ಬೆಂಗಳೂರು, ತೆಲಂಗಾಣ ಮುಂತಾದ ಪ್ರದೇಶಗಳಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದವರನ್ನೇ ಗುರಿಯಾಗಿರಿಸಿಕೊಂಡು ಅವರಿಂದ ಹಣ ಕೀಳುವ ದಂಧೆ ನಡೆಸುತ್ತಿದ್ದ. ಬೆಳಗಾವಿಯಲ್ಲಿ ಕೊಲ್ಲಾಪುರ ವೃತ್ತದ ಬಳಿ ತನ್ನ ಕೋಚಿಂಗ್ ಸೆಂಟರ್ ಅನ್ನು ಆರಂಭಿಸಿದ್ದ. ಬೆಳಗಾವಿ ಪರಿಸರದಲ್ಲಿ ಯಾವ ನೀಟ್ ಆಕಾಂಕ್ಷಿಗಳು ಕಡಿಮೆ ಅಂಕ ಪಡೆದುಕೊಂಡಿರುತ್ತಾರೋ ಅವರಿಗೆ ಕರೆ ಮಾಡಿ ನಿಮಗೆ ಮೆಡಿಕಲ್ ಸೀಟ್ ಕೊಡಿಸುತ್ತೇನೆ, ನನ್ನ ಪರಿಚಯಸ್ಥರು ಇದ್ದಾರೆ ಎಂದು ನಯವಾಗಿ ವಂಚಿಸುತ್ತಿದ್ದ.
ಬೆಳಗಾವಿಯಲ್ಲಿ ಈತ ಕೋಚಿಂಗ್ ಆರಂಭಿಸುವಾಗ ನೀಡಿರುವ ಬ್ಯಾಂಕ್ ಅಕೌಂಟ್, ಆಧಾರ್ ಎಲ್ಲವೂ ನಕಲಿಯಾಗಿದೆ. ಬೆಳಗಾವಿಯಲ್ಲಿ ದೂರು ದಾಖಲು ಆಗುತ್ತಿದ್ದಂತೆ ಪೊಲೀಸರು ಇವನ ಪತ್ತೆಗೆ ಶತ ಪ್ರಯತ್ನ ನಡೆಸಬೇಕಾಯಿತು. ಕಾರಣ ಈತ ಪದೇಪದೇ ತನ್ನ ಮೊಬೈಲ್ ಸಂಖ್ಯೆ ಬದಲಾಯಿಸುತ್ತಿದ್ದ. ಇದರಿಂದ ಆತನ ಕೊನೆಗೂ ಬೆಳಗಾವಿ ಪೊಲೀಸರು ಶತಪ್ರಯತ್ನದ ಮೂಲಕ ಅವನನ್ನು ಪತ್ತೆಹಚ್ಚಲು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆತನ 15 ಕಂಪ್ಯೂಟರ್ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ಜಫ್ತು ಮಾಡಲಾಗಿದೆ. ಆತ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ಪಡೆದುಕೊಂಡಿದ್ದ ಹಣವನ್ನು ಮತ್ತೆ ಮರಳಿಸಲು ಪೊಲೀಸರು ಪ್ರಯತ್ನ ನಡೆಸಿದ್ದು ಕೋರ್ಟ್ ಮೂಲಕ ಅದನ್ನು ಕೊಡಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಅವರು ಹೇಳಿದರು.