ಬೆಳಗಾವಿಯಲ್ಲಿ ವಾಸಿಸುವ ಕೇರಳದವರ ಅನುಕೂಲಕ್ಕೆ ಹುಬ್ಬಳ್ಳಿ-ಕೊಚ್ಚಿವೆಲ್ಲಿ- ಹುಬ್ಬಳ್ಳಿ ಸಾಪ್ತಾಹಿಕವನ್ನು ಬೆಳಗಾವಿವರೆಗೆ ವಿಸ್ತರಿಸಲು ಮನವಿ ಮಾಡಿರುವ ಜಗದೀಶ ಶೆಟ್ಟರ್, ಬೆಳಗಾವಿ- ಬೆಂಗಳೂರು ಬೆಳಗಾವಿ ವಂದೇ ಭಾರತ ಎಕ್ಸ್ ಪ್ರೆಸ್, ಬೆಳಗಾವಿ-ಪುಣೆ ವಂದೇ ಭಾರತ ಎಕ್ಸ್ ಪ್ರೆಸ್, ಬೆಳಗಾವಿ-ಅಯೋಧ್ಯೆ- ಬೆಳಗಾವಿ, ಬೆಳಗಾವಿ- ಪಂಢರಾಪುರ-ಬೆಳಗಾವಿ ವಂದೇ ಭಾರತ ರೈಲು ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ: ಬೆಳಗಾವಿ-ಕಿತ್ತೂರು- ಧಾರವಾಡ ಹೊಸ ರೈಲು ಮಾರ್ಗ ಯೋಜನೆ ಶೀಘ್ರ ಆರಂಭಿಸುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಂಸದ ಜಗದೀಶ ಶೆಟ್ಟರ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಜಗದೀಶ ಶೆಟ್ಟರ್ ಬೆಳಗಾವಿ- ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಎರಡು ವರ್ಷಗಳ ಹಿಂದೆ ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆ ನಂತರವು ರಾಜ್ಯ ಸರಕಾರದಿಂದ ಯಾವುದೇ ಭೂಮಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿಲ್ಲ. ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ಅನುಷ್ಠಾನ ಬಹಳ ಅಗತ್ಯವಿದೆ. ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ನೈರುತ್ಯ ರೈಲ್ವೆ ಇಲಾಖೆಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಹಸ್ತಾಂತರಿಸಲು ಕರ್ನಾಟಕ ಸರಕಾರಕ್ಕೆ ಆರಂಭಿಕ ಕ್ರಮ ಪ್ರಾರಂಭಿಸಲು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದರು.
ಬೆಳಗಾವಿಯಲ್ಲಿ ಮರುರೂಪಿಸಲಾದ ಹೊಸ ರೈಲು ನಿಲ್ದಾಣ ಎಲ್ಲಾ ರೀತಿಯ ನೂತನ ಸೌಲಭ್ಯಗಳನ್ನು ಹೊಂದಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ನಿವಾಸಿಗಳ ಬೇಡಿಕೆಯ ಆಧಾರದ ಮೇಲೆ ಹೊಸ ರೈಲುಗಳನ್ನು ಪರಿಚಯಿಸಲು ಅವರು ಮನವಿ ಮಾಡಿದರು.