ಬೆಳಗಾವಿ ಸಹ್ಯಾದ್ರಿ ಮಡಿಲಲ್ಲಿ ಇರುವ ನಗರ. ಆದರೆ ಇದೀಗ ಈ ನಗರದಲ್ಲಿ ವಾತಾವರಣದಲ್ಲಿ ಏರುಪೇರು ಆಗುತ್ತಿದೆ. ಸಾಕಷ್ಟು ಗಿಡಮರಗಳನ್ನು ಹೊಂದಿರುವ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ದಿನೇ ದಿನೇ ಮರಗಳನ್ನು ಕಡಿಯುತ್ತಿರುವುದು ಪರಿಸರ ಪ್ರೇಮಿಗಳಿಗೆ ಅಘಾತ ತಂದಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಈಗ ಮರಗಳ ಮಾರಣಹೋಮ ನಡೆಯುತ್ತಿದೆ. ವಿಶ್ವ ಪರಿಸರ ದಿನಾಚರಣೆ ಮುಗಿದು ಕೆಲವೇ ದಿನಗಳು ಕಳೆದಿವೆ. ಆದರೆ, ಅಷ್ಟರಲ್ಲೇ ಬೆಳಗಾವಿಯ ಮಹಾಂತೇಶನಗರದಲ್ಲಿ ಈಗ ರಾಜಾರೋಷವಾಗಿ ಮರಗಳ ಮಾರಣಹೋಮ ಮಾಡಲಾಗುತ್ತಿದೆ.
ಅರಣ್ಯ ಇಲಾಖೆಯ ವಾಹನವನ್ನು ಕಂಡು ಬಹುಶಃ ಇದು ಅರಣ್ಯ ಇಲಾಖೆಯವರೇ ಮರಗಳನ್ನು ಕತ್ತರಿಸಲು ಮುಂದಾಗಿರಬಹುದು ಎಂದು ನಾಗರಿಕರು ಸಂದೇಹ ಪಟ್ಟಿದ್ದರು. ಆದರೆ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳನ್ನು ಕಡಿದು ಸಾಗಿಸುವುದು ಅಪರಾಧ ಎಂದಿದ್ದರೂ ಅನುಮತಿ ಇಲ್ಲದೇ ವ್ಯಕ್ತಿಯೊಬ್ಬ ಮರಗಳನ್ನು ಹೇಗೆ ಕಡಿಯುತ್ತಿದ್ದಾನೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಬೆಳಗಾವಿ ನಗರದಲ್ಲಿ ಅಪಾಯಕಾರಿ ಆಗದೆ ಇರುವ ಈ ಮರಗಳನ್ನು ಕಡಿಯುವುದಾದರೂ ಏಕೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಗಾಳಿ, ಬೆಳಕು, ನೆರಳು ನೀಡುತ್ತಿದ್ದ ಮರಗಳಿಗೆ ರಾಜಾರೋಷವಾಗಿ ಕೊಡಲಿ ಪೆಟ್ಟು ನೀಡುವ ಮೂಲಕ ಅವುಗಳ ಹನನಕ್ಕೆ ಮುಂದಾಗಿರುವುದು ಪರಿಸರ ಪ್ರೇಮಿಗಳಿಗಂತೂ ಅತ್ಯಂತ ನೋವಿನ ಸಂಗತಿ ಆಗಿದೆ.
ಅರಣ್ಯ ಇಲಾಖೆಯ ವಾಹನ ಮುಂದಿಟ್ಟು ಇಲಾಖೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ. ಒಟ್ಟಾರೆ ಇದೀಗ ಬೆಳಗಾವಿಯಲ್ಲಿ ಕಡಿಯುತ್ತಿರುವ ಮರಗಳ ಮಾರಣ ಹೋಮ ನಿಲ್ಲಿಸಬೇಕು. ಮರಗಳನ್ನು ಯಾರು ಕಡಿಯುತ್ತಿದ್ದಾರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹವಾಗಿದೆ.