- ಬೆಂಗಳೂರು : ಇವಿಎಂ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿಗೆ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳು ಬಂದಿವೆ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧ ಹಾಗೂ ಬಿಬಿಎಂಪಿ ಮುಖ್ಯ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ಇವಿಎಂ ತೊಲಗಬೇಕು ಬ್ಯಾಲೆಟ್ ಮತದಾನ ಮತ್ತೆ ಬರಬೇಕು. ಈಗಾಗಲೇ ಫಲಿತಾಂಶ ಬಂದಾಗಿದೆ. ಈಗೇನೂ ಮಾಡಲು ಆಗುವುದಿಲ್ಲ” ಎಂದು ತಿಳಿಸಿದರು.
ಮತ್ತೊಮ್ಮೆ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು. ಮಧ್ಯಪ್ರದೇಶದಲ್ಲಿ ಬ್ಯಾಲೆಟ್ ಮತದಾನ ಇದ್ದಾಗ ಮೂರರಲ್ಲಿ ಎರಡು ಭಾಗದಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬೀಳುತ್ತಿದ್ದವು. ಇವಿಎಂ ಕಾರಣಕ್ಕೆ ಈಗ ಪರಿಸ್ಥಿತಿ ಬದಲಾಗಿದೆ. ಇದರ ಬಗ್ಗೆ ಮತ್ತಷ್ಟು ಆಳವಾಗಿ ಚಿಂತನೆ ನಡೆಸಬೇಕಿದೆ” ಎಂದರು.
ಬಿಬಿಎಂಪಿ ಆಸ್ತಿಗಳನ್ನು ಸರ್ಕಾರ ಅಡವಿಡುತ್ತಿದೆ ಎಂದು ಕೇಳಿದಾಗ “ಯಾವ ಅಡಮಾನವೂ ಇಲ್ಲ. ನಮ್ಮ ಬಿಬಿಎಂಪಿಯ ಆಸ್ತಿಯಗಳ ರಕ್ಷಣೆ ಹಾಗೂ ಎಷ್ಟು ಆಸ್ತಿಗಳಿವೆ ಎನ್ನುವ ಮರು ಸಮೀಕ್ಷೆ, ಗುತ್ತಿಗೆ ನವೀಕರಣ ಸೇರಿದಂತೆ ಇತರೇ ಕೆಲಸಗಳಿಗಾಗಿ ನಮ್ಮ ಅಂದಾಜು ವಿಭಾಗವನ್ನು ಭದ್ರಗೊಳಿಸಿ ದಾಖಲೆಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಅಡಮಾನವೂ ಇಲ್ಲ, ಏನೂ ಇಲ್ಲ” ಎಂದು ಹೇಳಿದರು.
ಬಿಬಿಎಂಪಿಯ ಜಾಹೀರಾತು ನಿಯಮಾವಳಿ ಬಗ್ಗೆ ಕೇಳಿದಾಗ “ಮುಂದಿನ ಒಂದು ವಾರಗಳ ಒಳಗಾಗಿ ನೂತನ ಜಾಹೀರಾತು ನೀತಿ ಜಾರಿಗೆ ತರಲಾಗುವುದು. ಮೆಟ್ರೋ ಪಿಲ್ಲರ್ ಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದರು.
ಬೃಹತ್ ಹೋರ್ಡಿಂಗ್ ಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಎಂದು ಕೇಳಿದಾಗ “ಇದರ ಬಗ್ಗೆ ಈಗಾಗಲೇ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಥಮ ಹಂತವಾಗಿ ಫ್ಲೆಕ್ಸ್ ನಿಷೇಧಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ಫೆಕ್ಸ್ ಗಳನ್ನು ತೆರವುಗೊಳಿಸಿ ದೂರು ದಾಖಲಿಸಿಕೊಳ್ಳಲಾಗಿದೆ” ಎಂದರು.
ಲಂಡನ್ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆಯೇ ಎಂದು ಕೇಳಿದಾಗ “ಅದರ ಬಗ್ಗೆ ಗೊತ್ತಿಲ್ಲ. ಶೀಘ್ರದಲ್ಲೇ ಮೀಸಲಾತಿ ನಿಗದಿ ಮಾಡಿ ಬಿಬಿಎಂಪಿ ಚುನಾವಣೆ ನಡೆಸಲಾಗುವುದು” ಎಂದು ಹೇಳಿದರು.
ದರ್ಶನ್ ಸೇರಿದಂತೆ ಅನೇಕರು ರಾಜಕಾಲುವೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದಿರುವ ಪ್ರಕರಣಗಳ ಬಗ್ಗೆ ಕೇಳಿದಾಗ “ನಾನು, ನೀನು ಯಾರೇ ತಡೆಯಾಜ್ಞೆ ತಂದಿದ್ದರು ತೆರವುಗೊಳಿಸಲಾಗುವುದು” ಎಂದರು.
ಮೇಕೆದಾಟು ವಿಚಾರಕ್ಕೆ ತಮಿಳುನಾಡು ಅಕ್ಷೇಪ ವ್ಯಕ್ತಪಡಿಸಿದೆ ಎಂದು ಕೇಳಿದಾಗ “ನಮ್ಮ ನೀರು ನಮ್ಮ ಹಕ್ಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯಾಯಲಯ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕೇಂದ್ರ ಸರ್ಕಾರ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇದರಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ನಿಗದಿಯಾಗಿರುವ ನೀರಿನ ಪಾಲನ್ನು ನೀಡಲು ಅನುಕೂಲವಾಗುತ್ತದೆ ಹೊರತು ನಮ್ಮ ಕರ್ನಾಟಕದ ಉಪಯೋಗಕ್ಕೆ ಬಳಸುವುದಿಲ್ಲ” ಎಂದರು.
ಬೆಂಗಳೂರು ಸುತ್ತಮುತ್ತಲಿನ 20 ಸಾವಿರ ಎಕರೆ ಜಮೀನು ಮಾರಾಟದ ಬಗ್ಗೆ ಕೇಳಿದಾಗ “ಇದು ಸುಳ್ಳು ಸುದ್ದಿ. 20 ಸಾವಿರ ಎಕರೆ ಜಮೀನು ಎಲ್ಲಿದೆ. ನಾವು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಸಲುವಾಗಿ ಭೂಸ್ವಾಧೀನದ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. 60/40 ಹಂಚಿಕೆಯ ಸೂತ್ರದ ಆಧಾರದ ಮೇಲೆ ನಿರ್ಮಾಣ ಮಾಡಲು ಹೊರಟಿದ್ದೇವೆ. ಇದರಿಂದ ರೈತರಿಗೂ ಹೆಚ್ಚು ಅನುಕೂಲವಾಗಲಿದೆ. ಇದರಿಂದ ರೈತರಿಗೆ 5 ಕೋಟಿಯಷ್ಟು ಪರಿಹಾರ ದೊರೆಯುತ್ತದೆ. ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
*ಕೇಂದ್ರ ಸರ್ಕಾರವೇ ಬೆಲೆ ಏರಿಕೆಗೆ ಕಾರಣ*
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ “75 ರೂಪಾಯಿಯಿಂದ 100 ರೂಪಾಯಿಗೆ ಬೆಲೆ ಏರಿಕೆ ಮಾಡಿದ್ದು ಬಿಜೆಪಿಯವರಲ್ಲವೇ. ಇತರೇ ರಾಜ್ಯಗಳಲ್ಲಿ ನಮಗಿಂತಲೂ ಹೆಚ್ಚು ಬೆಲೆಯಿದೆ. ಮಹಾರಾಷ್ಟ್ರ, ರಾಜಸ್ಥಾನದಲ್ಲಿ 104, ಬಿಹಾರದಲ್ಲಿ 107 ರೂ ಬೆಲೆಯಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದೇ ಬೆಲೆ ಏರಿಕೆಗೆ ಕಾರಣ” ಎಂದು ತಿರುಗೇಟು ನೀಡಿದರು.
*ನೀಟ್ ಮರು ಪರೀಕ್ಷೆ ನಡೆಸಿ*
ನೀಟ್ ಅಕ್ರಮದ ಬಗ್ಗೆ ಕೇಳಿದಾಗ “ಕರ್ನಾಟಕ ಸರ್ಕಾರ ನೀಟ್ ವಿರುದ್ದವಿದೆ. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳ ಜೊತೆ ನಾವಿದ್ದೇವೆ. ಕೇವಲ 1,563 ವಿದ್ಯಾರ್ಥಿಗಳಿಗೆ ಮಾತ್ರ ಮರು ಪರೀಕ್ಷೆ ನಡೆಸದೆ ಇಡೀ ದೇಶದಾದ್ಯಂತ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು” ಎಂದು ಆಗ್ರಹಿಸಿದರು.
*ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ*
ಗ್ಯಾರಂಟಿ ಯೋಜನೆಗಳು ತಲುಪದೆ ಇರುವವರಿಗೆ ಹಾಗೂ ಸೂಕ್ತ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕಾರಣಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿತ್ತು. ಚುನಾವಣಾ ಕಾರಣಕ್ಕೆ ಒಂದಷ್ಟು ಜನರು ಅಧಿಕಾರ ತೆಗೆದುಕೊಂಡಿರಲಿಲ್ಲ. ಹಿರಿಯ ನಾಯಕರಾದ ಜಿ.ಕೃಷ್ಣಪ್ಪ ಅವರು ಬೆಂಗಳೂರಿನ ಸಮಿತಿಯ ನೇತೃತ್ವವಹಿಸಿಕೊಂಡಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬಲಾಗುವುದು” ಎಂದರು.