ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ , ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಕಸ್ಟಡಿಗೆ ಕೇಳಲು ರಿಮ್ಯಾಂಡ್ ಅರ್ಜಿಯನ್ನು ಪೊಲೀಸರು ಸಲ್ಲಿಸಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ವಾದ ಮಂಡಿಸಿ, ಸಾಕ್ಷ್ಯಗಳ ನಾಶ ಆಗಿರುವುದರಿಂದ ದರ್ಶನ್ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ, ದರ್ಶನ್ ಪರ ವಕೀಲ 14 ದಿನ ಯಾಕೆ ಎಂದು ಪ್ರಶ್ನಿಸಿದರು. ಈಗಾಗಲೇ ದರ್ಶನ್ ಮೊಬೈಲ್ ಸೀಜ್ ಆಗಿದೆ, ದರ್ಶನ್ ಅವರ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಹೇಳಿದರು.
ಆರೋಪಿಗಳನ್ನು ಕಸ್ಟಡಿಗೆ ನೀಡಲು ಸರ್ಕಾರಿ ಅಭಿಯೋಜಕ ಕೋರಿದರೆ, ದರ್ಶನ್ ಪರ ವಕೀಲ ಅವರಿಗೆ ಕಿರುಕುಳ ನೀಡಬಾರದು, ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ನೀಡಲು ಸೂಚಿಸಿದರು. ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ಎಂದು ಹೇಳಿದ ಕೂಡಲೇ ನಟ ದರ್ಶನ್ ಕಣ್ಣೀರಿಟ್ಟಿದ್ದು ಕಂಡುಬಂತು.
ಹೀಗಾಗಿ ದರ್ಶನ್ ಅವರನ್ನು ಕಸ್ಟಡಿಗೆ ನೀಡಲಾಗಿದೆ. ಇದಕ್ಕೂ ಮುನ್ನಾ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಸಿಜಿ, ಬಿ.ಪಿ., ಶುಗರ್ ಇನ್ನಿತರ ಟೆಸ್ಟ್ ಮಾಡಲಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಪೊಲೀಸರು, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಕೆಲ ವಸ್ತುಗಳನ್ನು ಎಫ್ಎಸ್ಎಲ್ ತಂಡ ಸಂಗ್ರಹಿಸಿದೆ. ವಸ್ತುಗಳನ್ನು ಸೀಜ್ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.