ಬೆಳಗಾವಿ : ಬೆಳಗಾವಿಯ ಕಾಳಿ ಅಂಬ್ರಾಯಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜೂನ್ 6 ರಂದು (ಗುರುವಾರ) ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗೋಪಾಲಕೃಷ್ಣ ಸಣ್ಣ ತಂಗಿ ಅವರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭೂಮಿಯಲ್ಲಿರುವ ಜಲಚರ, ಭೂ ಚರ, ಪಶು-ಪಕ್ಷಿ, ಪ್ರಾಣಿಗಳಲ್ಲಿ ಹೊಂದಾಣಿಕೆ ಅವಶ್ಯ. ಪ್ರತಿಯೊಬ್ಬರು ಪರಿಸರ ಸ್ನೇಹಿಗಳಾಗಬೇಕು. ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಸಜ್ಜಾಗಬೇಕಾಗಿದೆ. ಹಿಂದೆ ಮಾಡಿದ ಪರಿಸರ ನಾಶದ ಪ್ರತ್ಯಕ್ಷ ಅನುಭವ ಇಂದು ಆಗುತ್ತಿದೆ. ಪರಿಸರದ ಸಂರಕ್ಷಣೆ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಜ್ಯೋತಿ ಕಾಲೇಜಿನ ಪ್ರಾಧ್ಯಾಪಕಿ ಪೂರ್ಣಿಮಾ ಪಾಟೀಲ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ವಿದೇಶಿಯರು ಅಳವಡಿಸಿಕೊಂಡು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಆದರೆ ನಾವು ಮರೆಯುತ್ತಿದ್ದೇವೆ. ವಿಶ್ವಶಾಂತಿ ಗಾಗಿ ಸದಾ ಪ್ರಾರ್ಥಿಸಬೇಕು. ಮೂಢನಂಬಿಕೆಗಳಿಂದ ಮುಕ್ತರಾಗಬೇಕು. ಪ್ರಕೃತಿಯೊಂದಿಗೆ ಮಾನವ ಸಂಬಂಧ ಬಹು ದೊಡ್ಡದು. ಪ್ರಕೃತಿ ಜೊತೆಗೆ ಮಾನವರು ಮಧುರ ಸಂಬಂಧ ಹೊಂದಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಸಾಧನಾ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಜೊತೆಗೆ ಆ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಸಹಾ ಮೂಡಿಸಬೇಕಾಗಿದೆ. ನಮ್ಮ ಮನಸ್ಸಿನ ಭಾವನೆಗಳನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇದೆ. ಸರ್ವಶಕ್ತನಾದ ಪರಮಾತ್ಮನ ಹೆಸರಿನಲ್ಲಿ ರಾಜಯೋಗ ಅಭ್ಯಾಸ ವಿಶ್ವ ಬದಲಾವಣೆಗೆ ಅವಶ್ಯ ಎಂದರು.
ಬಸವರಾಜ ಸದಲಗಿ, ಮನೋಹರ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 7 ದಿನಗಳ ಪ್ರಶಿಕ್ಷಣ ಪಡೆಯಲು ತಿಳಿಸಲಾಯಿತು. ಬ್ರಹ್ಮಕುಮಾರಿ ಮೋಹಿನಿ ಪ್ರಾರ್ಥಿಸಿದರು. ಬ್ರಹ್ಮಕುಮಾರಿ ಸಂಪತ್ತಿ ಸಂಸ್ಥೆಯ ಪರಿಚಯ ನೀಡಿದರು. ಶ್ರೀಕಾಂತ ನಿರೂಪಿಸಿದರು. ಸುಧೀರ ಇಂಗಳೆ ವಂದಿಸಿದರು.