ಬೆಳಗಾವಿ: ಭೂಮಿಯ ಮೇಲಿನ ಜೀವಗೋಳ ಸಮೃದ್ಧ ಪರಿಸರದ ಮೇಲೆಯೇ ಅವಲಂಬಿತವಾಗಿದೆ, ಪರಿಸರವಿಲ್ಲದೇ ಭುವಿಗೆ ಜೈವಿಕ ಅರ್ಥ ಕಲ್ಪಿಸಲಾಗದು, ಪರಿಸರ ಬೆಳೆಸುವುದು ಇಂದು ಮಾನವ ಕುಲದ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಸಾಮಾಜಿಕ ಅರಣ್ಯ ವಿಭಾಗದಿಂದ ವತಿಯಿಂದ ಸುವರ್ಣಸೌಧ ಬಳಿ
ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಸಿ ನೆಟ್ಟು ಬಸ್ತವಾಡ ಗ್ರಾಮದ ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅನಂತ ಆಕಾಶದಲ್ಲಿ ಜೀವಸಂಕುಲ ಭೂಮಿ ಹೊಂದಲು ಇಲ್ಲಿನ ಪರಿಸರವೇ ಕಾರಣ. ರಿತ್ಯ ಹವಾಮಾನ ಹಾಗೂ ಜೀವಸಂಕುಲದ ಸಹಜ ಬದುಕಿಗೆ ಸಮೃದ್ಧ ಕಾಡು ಜೊತೆಗೆ ಆಭರಣಗಳಾದ ವನ್ಯಸಂಕುಲ ಉಳಿಕೆ ಬಹಳ ಮುಖ್ಯ ಎಂದರು. ಕೇಂದ್ರ ರಾಜ್ಯ ಸರಕಾರಗಳು ಪರಿಸರ ಮತ್ತು ಜೀವವೈವಿಧ್ಯ ಕಾಪಾಡಲು ಅಭಯಾರಣ್ಯಗಳು, ನ್ಯಾಷನಲ್ ಪಾರ್ಕ್, ಬಯೋಮ್ಸ್, ಝೂ ಗಳ ಮೂಲಕ ಪ್ರಯತ್ನಿಸುತ್ತಿವೆ. ದೇಶದ ಜನತೆ ಸಂವಿಧಾನಿಕ ಮೂಲಭೂತ ಕರ್ತವ್ಯಗಳನ್ನು ಪಾಲಿಸುವಂತೆ ಪರಿಸರ ಬೆಳೆಸುವ ಕರ್ತವ್ಯವನ್ನು ನಿಭಾಯಿಸಿದರೆ ನಮ್ಮ ಮುಂದಿನ ಮಾನವ ಪೀಳಿಗೆ ಉಳಿದು ಬೆಳೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಹವಾಮಾನ ವೈಪರಿತ್ಯ ಮತ್ತು ಹೆಚ್ಚುತ್ತಿರುವ ಉಷ್ಣತೆಯ ಪ್ರಭಾವವನ್ನು ಈ ಬೇಸಿಗೆಯಲ್ಲಿ ನಾವೆಲ್ಲ ಕಂಡಿದ್ದೇವೆ. ಅರಣ್ಯ ಇಲಾಖೆ, ಜನತೆ, ಪಾಲಕರು ಹಾಗೂ ಮಕ್ಕಳು ಪರಿಸರ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಕೆ. ಎಸ್. ಗೊರವಾರ, ಎಸಿಎಫ್ ಖೇಮಸಿಂಗ್ ರಾಠೋಡ್, ಆರ್ ಎಫ್ ಓ ಗಿರೀಶ್ ಇಟಗಿ, ಡಿಆರ್ ಎಫ್ ಓ ನಾಗರಾಜ ಇಟ್ನಾಳ ಇತರರು ಉಪಸ್ಥಿತರಿದ್ದರು.
ಮಾನ್ಸೂನ್ ಆರಂಭದ ಹಿನ್ನಲೆಯಲ್ಲಿ ಇದೇ ಸಂದರ್ಭ ಸಾರ್ವಜನಿಕರಿಗೆ ಡಿಸಿ ಸಸಿ ವಿತರಿಸಿದರು.