ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಹುದೊಡ್ಡ ಗೆಲುವು ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
ಅದರಲ್ಲೂ ಲಿಂಗಾಯತ ಕೋಟಾದಡಿ ಹಿರಿಯ ನಾಯಕರೆಂಬ ಕಾರಣಕ್ಕೆ ಬಿಜೆಪಿ ವರಿಷ್ಠರು ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ದಯಪಾಲಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಜಗದೀಶ್ ಶೆಟ್ಟರ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ವಂಚಿಸಲಾಗಿತ್ತು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ನಾಲ್ಕು ತಿಂಗಳ ಹಿಂದೆ ಮತ್ತೆ ಅವರನ್ನು ಬಿಜೆಪಿಗೆ ಕರೆತರಲು ಹಲವು ಆಫರ್ ನೀಡಲಾಗಿತ್ತು. ಆಗ ಅವರು ಬಿಜೆಪಿ ವರಿಷ್ಠರಿಗೆ ಹಲವು ಷರತ್ತು ಒಡ್ಡಿದ್ದಾರೆ ಎನ್ನಲಾಗಿದೆ.
ಆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಹಲವು ಆಯ್ಕೆಗಳನ್ನು ಅವರ ಮುಂದಿರಿಸಿದ್ದರು. ಬೆಳಗಾವಿಯಿಂದ ಬಿಜೆಪಿ ಟಿಕೆಟ್ ನೀಡುವುದು, ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡುವುದು ಅಥವಾ ಯಾವುದಾದರೂ ಒಂದು ರಾಜ್ಯಕ್ಕೆ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಅವರಿಗೆ ನೀಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ರಾತ್ರೋರಾತ್ರಿ ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಬಿಜೆಪಿಗೆ ಮತ್ತೆ ಸೇರ್ಪಡೆ ಮಾಡಿಕೊಂಡಿದ್ದರು. ಆಗ ಬಿಜೆಪಿ ವರಿಷ್ಠರು ನೀಡಿದ್ದ ಆಶ್ವಾಸನೆಯಂತೆ ಅವರು ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದು ಇದೀಗ ಅವರಿಗೆ ಅವಕಾಶಗಳು ತೆರೆದುಕೊಂಡಿವೆ.
ಇಷ್ಟರಲ್ಲೇ ಮೋದಿ ಸಂಪುಟ ಮತ್ತೆ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದ್ದು ಬೆಳಗಾವಿಯಿಂದ ನೂತನವಾಗಿ ಆಯ್ಕೆ ಆಗಿರುವ ಜಗದೀಶ್ ಶೆಟ್ಟರ್ ಕೇಂದ್ರ ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಬಿಟ್ಟರೆ ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದ ಬಹುದೊಡ್ಡ ನಾಯಕರು. ಈ ಹಿಂದೆ ಸಹಾ ಕರ್ನಾಟಕದಲ್ಲಿ ಲಿಂಗಾಯತ ಕೋಟಾದಡಿ ಅವರಿಗೆ ಮುಖ್ಯಮಂತ್ರಿ ಹುದ್ದೆ ದಯಪಾಲಿಸಲಾಗಿತ್ತು. ಇದೀಗ ಕರ್ನಾಟಕದ ಪ್ರಬಲ ಸಮುದಾಯಕ್ಕೆ ಸೇರಿದ ಲಿಂಗಾಯತ ಸಮುದಾಯದ ಮತಗಳನ್ನು ಗಮನಿಸಿ ಅವರಿಗೆ ಲಿಂಗಾಯತ ಕೋಟಾದಡಿ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಆಪ್ತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದಾರೆ. ಅವರು ಸಹಾ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೂ ಅವರಿಗೆ ಈ ಸಲ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.
ಉಳಿದಂತೆ ಬ್ರಾಹ್ಮಣ ಕೋಟಾದಡಿ ಕೇಂದ್ರದ ಹಾಲಿ ಸಚಿವ ಹುಬ್ಬಳ್ಳಿಯ ನೂತನ ಸಂಸದ ಪ್ರಹ್ಲಾದ್ ಜೋಶಿ, ಒಕ್ಕಲಿಗ ಸಮುದಾಯದ ಕೇಂದ್ರದ ಹಾಲಿ ಸಚಿವೆ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ, ಮಂಡ್ಯದಿಂದ ಜೆಡಿಎಸ್ ನಿಂದ ಆಯ್ಕೆ ಆಗಿರುವ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಮತ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರನ್ನು ಸೋಲಿಸಿ ಅಚ್ಚರಿ ಫಲಿತಾಂಶ ತಂದಿರುವ ಡಾ.ಮಂಜುನಾಥ ಅವರಿಗೂ ಸಹಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಎಸ್ ಸಿ, ಎಸ್ ಟಿ ಕೋಟಾದಡಿ ಚಿತ್ರದುರ್ಗ ಮತಕ್ಷೇತ್ರದಿಂದ ಆಯ್ಕೆಯಾಗಿರುವ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಪರಿಗಣಿಸಿದರೂ ಅಚ್ಚರಿಯಿಲ್ಲ.
ಒಟ್ಟಾರೆ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರಲ್ಲಿ ಯಾರಿಗೆ ಸಚಿವ ಸ್ಥಾನ ಭಾಗ್ಯ ಸಿಗುತ್ತದೋ ನೋಡಬೇಕು.