ಬೆಳಗಾವಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಘಟನೆಯಲ್ಲಿ ಗಾಯಗೊಂಡ ತಂದೆಯನ್ನು ಕಾಪಾಡಲು ಸದಲಗಾ ಸರ್ಕಾರಿ ಆಸ್ಪತ್ರೆಯಿಂದ ಚಿಕ್ಕೋಡಿವರೆಗೂ ಮಗನೇ ಸರ್ಕಾರಿ ಆಂಬ್ಯುಲೆನ್ಸ್ ಓಡಿಸಿಕೊಂಡು ಬಂದಿದ್ದಾನೆ.
ಸದಲಗಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿ ಚಾಲಕ ಇಲ್ಲದ ಹಿನ್ನೆಲೆಯಲ್ಲಿ ಯುವಕನೇ ಆಂಬ್ಯುಲೆನ್ಸ್ ಚಲಾಯಿಸಿಕೊಂಡು ಬಂದು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದು ಹಾಳಾದ ಆರೋಗ್ಯ ಇಲಾಖೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜನವಾಡ ಗ್ರಾಮದ ಸಿದ್ದು ಪೂಜಾರಿಗೆ ಆತನ ಪತ್ನಿ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸಿದ್ದು ಪೂಜಾರಿ ಕಿವಿ ಕಟ್ ಆಗಿತ್ತು, ಜತೆಗೆ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ತಂದೆಯನ್ನು ಕೂಡಲೇ ಬೈಕ್ ಮೇಲೆ ಕೂರಿಸಿಕೊಂಡ ಮಗ ಮಾಳು ಪೂಜಾರಿ ಸದಲಗಾ ಸರ್ಕಾರಿ ಕರೆದುಕೊಂಡು ಹೋಗಿದ್ದ.
ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಆಂಬ್ಯುಲೆನ್ಸ್ ಕೊಡಿ ಎಂದಿದ್ದಕ್ಕೆ ಆಸ್ಪತ್ರೆ ವೈದ್ಯರು ಚಾಲಕ ಇಲ್ಲ, ನೀವೇ ಆಂಬ್ಯುಲೆನ್ಸ್ ತೆದುಕೊಂಡು ಹೋಗಿ ಎಂದಿದ್ದಾರೆ. ಹೀಗಾಗಿ ಮಾಳು ಪೂಜಾರಿ ಗಾಯಾಳು ತಂದೆಯನ್ನು ಸರ್ಕಾರಿ ಆಂಬ್ಯುಲೆನ್ಸ್ ವಾಹನವನ್ನು ತಾನೇ ಚಲಾಯಿಸಿಕೊ ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.