ಖಾನಾಪುರ: ಈ ಬಾರಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಎದುರಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ತಾಲೂಕಿನ ಲೋಂಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅತಿವೃಷ್ಟಿ ಹಾಗೂ ಪಾಂಡರಿ ನದಿಯ ಪ್ರವಾಹದಿಂದ ಹಾನಿಗೊಳಗಾಗುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಈ ಹಿಂದೆ ಲೋಂಡಾ ಗ್ರಾಮ ಪ್ರವಾಹಕ್ಕೆ ತುತ್ತಾಗಿರುವುದರಿಂದ, ಪಾಂಡರಿ ನದಿ ದಡದಲ್ಲಿರುವ ನಿವಾಸಿಗಳನ್ನು ಮುಂಚಿತವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು. ಗ್ರಾಮದ ಸುರಕ್ಷಿತ ಸ್ಥಳದಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಊಟ, ವಸತಿ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ನೆರವಿನಿಂದ ಔಷಧೋಪಚಾರದ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.
ಕೆಲವು ವರ್ಷಗಳ ಹಿಂದೆ (2019-20, 2020-21) ಲೋಂಡಾ ಗ್ರಾಮದಲ್ಲಿ ಪಾಂಡರಿ ನದಿಯ ಪ್ರವಾಹದಿಂದಾಗಿ ಮನೆ ಹಾಗೂ ಜಮೀನು ಕಳೆದುಕೊಂಡಿರುವವರಿಗೆ ರಾಜೀವ ಗಾಂಧಿ ನಿಗಮದ ಮಾರ್ಗಸೂಚಿಯಂತೆ ಗ್ರಾಮದ ಸರ್ಕಾರಿ ಜಾಗೆಯಲ್ಲಿ ನಿವೇಶನ (ಸೈಟ್) ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ತಾಲೂಕು ವ್ಯಾಪ್ತಿಯಲ್ಲಿ ಮಲಪ್ರಭಾ ನದಿ ಸೇರಿದಂತೆ ಇನ್ನಿತರ ನದಿ ಹಾಗೂ ಹಳ್ಳಗಳಿಂದ ಉಂಟಾಗಬಹುದಾದ ಪ್ರವಾಹವನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ತಾಲೂಕಾಮಟ್ಟದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ತಿಳಿಸಿದರು.
ಅಗತ್ಯ ಸಿದ್ಧತೆ ಕೈಗೊಳ್ಳಿ:
ಅಗತ್ಯವಿರುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಳ್ಳುವ ಗ್ರಾಮಗಳನ್ನು ಗುರುತಿಸಿ, ಜನರನ್ನು ಮುಂಚಿತವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ನುರಿತ ಈಜುಗಾರರ ಪಟ್ಟಿ ಮಾಡಿಕೊಳ್ಳುವುದು, ಸ್ವಯಂಸ್ವೇವಕರ ಪಟ್ಟಿ ಮಾಡಿಟ್ಟುಕೊಳ್ಳಬೇಕು. ಆಹಾರ ಧಾನ್ಯಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಔಷಧೋಪಚಾರದ ವ್ಯವಸ್ಥೆ ಸೇರಿದಂತೆ ಇನ್ನಿತರೇ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕೆಂದು ಸಿಇಓ ರವರು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಾಗೀರದಾರ, ತಹಶೀಲ್ದಾರ್ ಪ್ರಕಾಶ ಗಾಯಕವಾಡ, ತಾಪಂ ಪಂಚಾಯತರಾಜ್ ಸಹಾಯಕ ನಿರ್ದೇಶಕ ವಿಜಯ ಕೊತಿನ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಖೋತ, ಅಧ್ಯಕ್ಷ ನೀಲಕಂಠ ಉಸಪಕರ, ತಾಂತ್ರಿಕ ಸಹಾಯಕ ಬಸವರಾಜ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.