ಬೆಂಗಳೂರು : ರಾಜ್ಯದಲ್ಲಿ ಹೈ ಸೆಕ್ಯೂರೆಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸದ ವಾಹನ ಸವಾರರ ವಿರುದ್ದ ಜೂನ್ 12ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಭರವಸೆ ನೀಡಿದೆ.
ಎಚ್ಎಸ್ಆರ್ಪಿ ಅಳವಡಿಕೆಗೆ ಮೇ 31ರವರೆಗೆ ವಿಧಿಸಲಾಗಿರುವ ಗಡವನ್ನು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಚ್ಎಸ್ಆರ್ಪಿ ತಯಾರಿಕಾ ಕಂಪನಿಯಾದ ಬಿಎನ್ಡಿ ಎನರ್ಜಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ
ನಡೆಸಿದ ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರ ನ್ಯಾಯಪೀಠಕ್ಕೆ ಸರ್ಕಾರ ಈ ಭರವಸೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಅಡ್ವಕೇಟ್ ಜನರಲ್ ರೂಬೆನ್ ಜೇಕಬ್, ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾವೆ ಬರುವ ಜೂ. 11ರಂದು ವಿಚಾರಣೆಗೆ ನಿಗದಿಯಾಗಿದೆ.
ಹೀಗಾಗಿ, ಈ ಮಧ್ಯಂತರ ಅರ್ಜಿ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೂ.11ರವರೆಗೂ ಎಚ್ಎಸ್ಆರ್ಪಿ ಅಳ ವಡಿಕೆಗೆ ಕಾಲಾವಕಾಶ ನೀಡಬಹುದೇ ಎಂದು ಪ್ರಶ್ನಿಸಿತು. ಇದಕ್ಕೆ ಹೆಚ್ಚುವರಿ ಅಡ್ವಕೇಟ್ ಜನರಲ್ ಉತ್ತರಿಸಿ, ಜೂ. 12ರವರೆಗೆ ಎಚ್ಎಸ್ಆರ್ಪಿ ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿತು.