ಬೆಳಗಾವಿ: ಹಾಸನ ಜಿಲ್ಲೆ ಆಲೂರು ಬಳಿ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಜಾ ದಿನಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಪಾಲಕರಲ್ಲಿ ಮನವಿ ಮಾಡಿದ್ದಾರೆ.
ರಜೆಯ ದಿನಗಳಲ್ಲಿ ವಿವಿಧ ರೀತಿಯ ದುರಂತಗಳಲ್ಲಿ ಮಕ್ಕಳ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬರ
ಜೀವ ಅತ್ಯಂತ ಅಮೂಲ್ಯವಾದದ್ದು. ಹಾಗಾಗಿ ಯಾವುದೇ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಬಾರದು. ಪಾಲಕರು ಸದಾ ಮಕ್ಕಳ ಚಟುವಟಿಕೆಗಳನ್ನು ಗಮನಿಸುತ್ತಿರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಮಕ್ಕಳು ರಜಾ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡಲು ತೆರಳುತ್ತಾರೆ. ಈ ವೇಳೆ ಸುರಕ್ಷಿತ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಪಾಲಕರೊಬ್ಬರು ಜೊತೆಯಲ್ಲಿರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆಯಿಂದ ದೂರವಿರಬೇಕು. ಇತರರು ಕೂಡ ಎಚ್ಚರಿಕೆಯಿಂದ ವಾಹನ ಓಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಪಾಲಕರು ತಿಳಿ ಹೇಳಬೇಕು. ಯಾವುದೇ ರೀತಿಯ ಚಟುವಟಿಕೆ ಸಂದರ್ಭದಲ್ಲಿ ಸುರಕ್ಷತೆಯ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಸಚಿವರು ವಿನಂತಿಸಿದ್ದಾರೆ.