ಕಲಬುರಗಿ : ಕಳೆದೆರಡು ವಾರದಿಂದ ಬಿಸಿಲಿನ ತಾಪ ಹಾಗೂ ಉಷ್ಣ ಮಾರುತಗಳಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 44. 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಾಳಗಿಯಲ್ಲಿ 44. 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಲಬುರಗಿಯಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ತಾಪಮಾನ. ವಾಡಿಕೆಯಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸಾಮಾನ್ಯವಾಗಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿತ್ತು. ಮೇ ತಿಂಗಳಲ್ಲಿ ಸಾಮಾನ್ಯವಾಗಿ 44-45ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಏಪ್ರಿಲ್ ನಲ್ಲಿ 44.4 ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಆತಂಕ ಮೂಡಿಸಿದೆ. ನೆಲೋಗಿಯಲ್ಲಿ 42. 2, ಸೇಡಂನ ಆಡಕಿಯಲ್ಲಿ 43.5, ಕಲಬುರಗಿಯ ಪಟ್ಟಣದಲ್ಲಿ 43.5, ಸೇರಿದಂತೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಬುಧವಾರ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದು ಐಎಂಡಿ ಮಾಹಿತಿ ಆಧರಿಸಿ ಜಿಲ್ಲಾಡಳಿತ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.