ಬೆಂಗಳೂರು : ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್. ಈಶ್ವರಪ್ಪ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಕರೆ ಮಾಡಿದ್ದು, ನಾಳೆ (ಏಪ್ರಿಲ್ 3) ಈಶ್ವರಪ್ಪ ಅವರನ್ನು ದೆಹಲಿಗೆ ಬುಲಾವ್ ಮಾಡಿದ್ದಾರೆ. ಹೀಗಾಗಿ ಈಶ್ವರಪ್ಪ ದೆಹಲಿಗೆ ತೆರಳಲಿದ್ದಾರೆ.
ಮಗ ಕಾಂತೇಶ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಿರುವ ಶಿವಮೊಗ್ಗದಲ್ಲಿ ಸ್ಪರ್ಧಿಸಿ ಯಡಿಯೂರಪ್ಪ ಅವರಿಗೆ ಸಡ್ಡು ಹೊಡೆದಿರುವ ಈಶ್ವರಪ್ಪ, ಕಳೆದ 15 ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ.
ಈಶ್ವರಪ್ಪ ಬಂಡಾಯ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಈಶ್ವರಪ್ಪ ಅವರಿಗೆ ಸ್ವತಃ ಕರೆ ಮಾಡಿರುವ ಅಮಿತ್ ಶಾ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ನಾನು ದೆಹಲಿಗೆ ಬರುತ್ತೇನೆ. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಅಲ್ಲದೆ, ನಾನು ಸ್ಪರ್ಧಿಸಿ ಗೆದ್ದು ಬಿಜೆಪಿಗೆ ಮರಳುತ್ತೇನೆ. ನಿಮ್ಮ ಬೆಂಬಲವಿರಲಿ ಎಂದು ಈಶ್ವರಪ್ಪ ಅವರು ಅಮಿತ್ ಷಾ ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಗೆ ಬಂದಾಗ ಇಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ಹೇಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಒಟ್ಟಾರೆ ಶಿವಮೊಗ್ಗದ ಬಂಡಾಯ ದೆಹಲಿ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ. ಇದರ ಶಮನಕ್ಕೆ ಹೈಕಮಾಂಡ್ ಎಂಟ್ರಿಯಾಗಿದೆ. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಕೊಪ್ಪಳ ಕ್ಷೇತ್ರಗಳ ಬಂಡಾಯವನ್ನು ಶಮನಗೊಳಿಸಿದ್ದ ಬಿಜೆಪಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಶಮನಕ್ಕೆ ಮುಂದಾಗಿದೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ ನಂತರ ಈಶ್ವರಪ್ಪ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಕಾದು ನೋಡಬೇಕಿದೆ.