ಬೆಳಗಾವಿ: ಹಿರಿಯ ಸಾಹಿತಿ ಪ್ರಾ.ಬಿ.ಎಸ್.ಗವಿಮಠ ಮತ್ತು ಅವರ ಪತ್ನಿ ಶ್ರೀಮತಿ ಸುಗಂಧ ಬಿ.ಗವಿಮಠ ಇವರು ಕೆ.ಎಲ್.ಇ. ಸಂಸ್ಥೆಯ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ದೇಹದಾನ ಮಾಡಲು ನಿರ್ಧರಿಸಿದ್ದಾರೆ.
1947 ರಲ್ಲಿ ಇದೇ ಕಂಕಣವಾಡಿ ಆಸ್ಪತ್ರೆಯಲ್ಲಿ ಜನಿಸಿದ್ದ ಇವರಿಗೆ ಈ ಕಾಲೇಜಿನ ಬಗ್ಗೆ ಭಾವನಾತ್ಮಕ ನಂಟಿದೆ. ಕೆ.ಎಲ್.ಇ.ಸಂಸ್ಥೆಯಲ್ಲಿಯೇ ಓದಿ, ಅಲ್ಲಿಯೇ 40 ವರ್ಷಗಳ ಕಾಲ ಶಿಕ್ಷಕರಾಗಿ, ಪ್ರಾಚಾರ್ಯರಾಗಿ, ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಕೆಎಲ್ಇ ಚರಿತ್ರೆ ಬರೆದ ಇತಿಹಾಸಕಾರರೆಂಬ ಹೆಗ್ಗಳಿಕೆ ಇವರದು. ಮರಣಾನಂತರ ಕೂಡ ತನ್ನ ದೇಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಿ ಎಂಬುದೇ ಅವರ ಆಶಯ. ಈ ದಿಶೆಯಲ್ಲಿ ಬೈಲಹೊಂಗಲ ರಾಮಣ್ಣನವರ ಚಾರಿಟೇಬಲ್ ಟ್ರಸ್ಟ್ ಮೂಲಕ ಬಿ.ಎಂ.ಕಂಕಣವಾಡಿ ಕಾಲೇಜಿಗೆ ಮರಣೋತ್ತರ ದೇಹದಾನವನ್ನು ಮಾಡಲು ದಂಪತಿ ಸಮೇತ ವಾಗ್ದಾನ ಮಾಡಿದ್ದರು.
ಈ ಸಂದರ್ಭದಲ್ಲಿ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜಿನ ಶರೀರ ರಚನಾಶಾಸ್ತ್ರದ ಮುಖ್ಯಸ್ಥರು ಹಾಗೂ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಬೈಲಹೊಂಗಲದ ಕಾರ್ಯದರ್ಶಿ, ದೇಹದಾನ ಜಾಗೃತಿಗಾಗಿ ತಮ್ಮ ತಂದೆ ಮೃತದೇಹ ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ವೈದ್ಯಕೀಯ ಇತಿಹಾಸ ನಿರ್ಮಿಸಿದ ಡಾ.ಮಹಾಂತೇಶ ರಾಮಣ್ಣನವರ ಅವರಿಗೆ ಮರಣೋತ್ತರ ದೇಹದಾನ ಪತ್ರವನ್ನು ಸಲ್ಲಿಸಿದರು. ಡಾ.ಮಹೇಶ ಗುರನಗೌಡರ ಉಪಸ್ಥಿತರಿದ್ದರು.