ಇಟಾನಗರ : ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದ್ದು, ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಆದರೆ, ಇದಕ್ಕೂ ಮುನ್ನ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಡಿಸಿಎಂ ಚೌನ ಮೇಯ್ನ್ ಸೇರಿದಂತೆ ಒಟ್ಟು 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾದ ಹಿನ್ನೆಲೆ ಪೇಮಾ ಖಂಡು ಮತ್ತು ಇತರೆ ಒಂಬತ್ತು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ತವಾಂಗ್ ಜಿಲ್ಲೆಯ ಮುಕ್ತೋ ವಿಧಾನಸಭಾ ಕ್ಷೇತ್ರದಿಂದ ಪೇಮಾ ಖಂಡು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಚೌಕಂ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಚೌನಾ ಮೇಯ್ನ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಬಯಾಮ್ಸೊ ಕ್ರಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರು ನಾಮಪತ್ರ ಹಿಂಪಡೆದ ಹಿನ್ನೆಲೆ ಚೌನಾ ಮೇಯ್ನ್ ಅವರು ಅವಿರೋಧವಾಗಿ ಆಯ್ಕೆಯಾದರು.
ತಾಲಿ ಕ್ಷೇತ್ರದಿಂದ ಜಿಕಕೆ ಟಾಕೂ, ರೋಯಿಂಗ್ ಕ್ಷೇತ್ರದಿಂದ ಮುಚು ಮಿಥಿ, ಇಟಾನಗರ ಕ್ಷೇತ್ರದಿಂದ ತೆಚಿ ಕಸೋ, ತಲಿಹಾ ಕ್ಷೇತ್ರದಿಂದ ನ್ಯಾಟೋ ದುಕಾಮ್, ಬೊಮ್ದಿಲಾ ಕ್ಷೇತ್ರದಿಂದ ಡೊಂಗ್ರು ಸೊಯಿಂಗ್ಜು, ಸಾಗಲೀ ಕ್ಷೇತ್ರದಿಂದ ರಾತು ತೆಚಿ, ಜಿರೋ ಹಪೋಲಿ ಕ್ಷೇತ್ರದಿಂದ ಹಗೆ ಅಪಾ, ಹಾಗೂ ಹಯುಲಿಯಾಂಗ್ ಕ್ಷೇತ್ರದಿಂದ ದಾಸಂಗ್ಲೂ ಪುಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ ಎಂದು ಪವನ್ ಕುಮಾರ್ ಸೇನ್ ತಿಳಿಸಿದ್ದಾರೆ.