ಬೈಲಹೊಂಗಲ: ಪಕ್ಷದ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯ ಮುಖಂಡರೆಲ್ಲ ಸೇರಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೃಣಾಲ ಹೆಬ್ಬಾಳಕರ್ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದು, ಒಂದೆರಡು ದಿನದಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೈಲಹೊಂಗಲದ ಶಿವಬಸವ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮೃಣಾಲ ಹೆಬ್ಬಾಳಕರ್ ಕಳೆದ 10 ವರ್ಷದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದ ಮನೆ ಮನೆಗೆ ಪರಿಚಿತನಾಗಿದ್ದಾನೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲ ಮುಖಂಡರ ಪ್ರಯತ್ನದಿಂದಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಉತ್ತಮವಾಗಿದೆ. ಸರಕಾರದ ಗ್ಯಾರಂಟಿ ಯೋಜನೆ ಕೂಡ ನಮಗೆಲ್ಲ ಶಕ್ತಿ ತುಂಬಿದೆ. ಬರುವ ಚುನಾವಣೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿ ಬೆಳಗಾವಿ. ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಭೆಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಮೃಣಾಲ ಹೆಬ್ಬಾಳಕರ್ ಮೊದಲಾದವರು ಮಾತನಾಡಿದರು.
ಮಹಾಂತೇಶ ಮತ್ತಿಕೊಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಶಂಕರಗೌಡ ಪಾಟೀಲ, ಶಿವರುದ್ರಪ್ಪ ಹಟ್ಟಿಹೊಳಿ, ಬಸವರಾಜ ಶೇಗಾಂವಿ, ರಾಜು ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಅರ್ಜುನ ಕಲಕುಟಕರ್, ರಮೇಶ್ ಪರಂಡಿ, ಶಿವಕುಮಾರ ಹಂಪಣ್ಣವರ, ಅಂಬಿಕಾ ಕೊಟಬಾಗಿ, ಮಹಾಂತೇಶ ಕಳ್ಳಿಬಡ್ಡಿ, ಶಶಿಕಲಾ ಹೊಸಮನಿ, ಲಕ್ಷ್ಮೀ ಬಡ್ಲಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.