ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕಮಲನಾಥ ಮತ್ತು ಅಶೋಕ ಗೆಹ್ಲೋಟ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಪುತ್ರರಿಗೆ ಟಿಕೆಟ್ ನೀಡಲಾಗಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ ಅವರ ಪುತ್ರರಾಗಿರುವ ನಕುಲನಾಥ ಅವರನ್ನು ಮಧ್ಯಪ್ರದೇಶದ ಚಿಂದ್ವಾರದಿಂದ ಕಣಕ್ಕಿಳಿಸಲಾಗಿದೆ. ಅವರು ಕ್ಷೇತ್ರದಿಂದ ಹಾಲಿ ಸಂಸದರಾಗಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುತ್ರ ವೈಭವ ಗೆಹ್ಲೋಟ್ ಅವರಿಗೆ ರಾಜಸ್ಥಾನದ ಜಲೋರ್ನಿಂದ ಟಿಕೆಟ್ ನೀಡಲಾಗಿದೆ.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ ಗೊಗೊಯ್ ಅವರ ಪುತ್ರ ಗೌರವ ಗೊಗೊಯ್ ಅವರಿಗೆ ಜೋರ್ಹತ್ ನಿಂದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನ ಎರಡನೇ ಪಟ್ಟಿಯಲ್ಲಿ ಅಸ್ಸಾಂನಿಂದ 12, ಗುಜರಾತ್ನಿಂದ 7, ಮಧ್ಯಪ್ರದೇಶದಿಂದ 10, ರಾಜಸ್ಥಾನದಿಂದ 10 ಮತ್ತು ದಮನ್ ಮತ್ತು ದಿಯುನಿಂದ 1 ಅಭ್ಯರ್ಥಿಗಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಪ್ರಕಾರ, ಪಟ್ಟಿಯಲ್ಲಿ ಶೇ.76.7ರಷ್ಟು ಅಭ್ಯರ್ಥಿಗಳು ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ ಎಂದು ತಿಳಿಸಿದರು.
ಜೋಧ್ಪುರದಿಂದ 2019 ರ ಲೋಕಸಭೆಯಲ್ಲಿ ಗೆಲ್ಲಲು ವೈಭವ ಗೆಹ್ಲೋಟ್, ತಮ್ಮ ಕ್ಷೇತ್ರವನ್ನು ಜಲೋರ್ಗೆ ಬದಲಾಯಿಸಿದ್ದಾರೆ. ಅದು ಅವರ ತಂದೆಯ ತವರು ನೆಲವಾಗಿದೆ.
ಸೋಮವಾರ ನಡೆದ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಗೆ ಅಶೋಕ ಗೆಹ್ಲೋಟ್ ಗೈರಾಗಿದ್ದರು. ಗೆಹ್ಲೋಟ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊರ್ವ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಜೋಧ್ಪುರದಿಂದ ಸ್ಪರ್ಧಿಸದಿರಲು ಗೆಹ್ಲೋಟ್ ಅವರ ಅನಾರೋಗ್ಯದ ಕಾರಣವನ್ನು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ..