ಬೆಳಗಾವಿ :
ವಿಧಾನಸಭೆಯ ಉಪಸಭಾಧ್ಯಕ್ಷ
ಹಾಗೂ ಸವದತ್ತಿ ಬಿಜೆಪಿ ಶಾಸಕ ಆನಂದ ಮಾಮನಿ (56)ಅವರ ಸಾವು ಬೆಳಗಾವಿ ಜಿಲ್ಲೆಗೆ ಬರ ಸಿಡಿಲು ಬಡಿದಂತಾಗಿದೆ.
2 ತಿಂಗಳುಗಳಿಂದ ಅವರು ಚೆನ್ನೈ ಹಾಗೂ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹತ್ತಿ ವ್ಯಾಪಾರದಿಂದ ಗುರುತಿಸಿಕೊಂಡಿದ್ದ ಅವರು ವಿಧಾನಸಭೆವರೆಗೂ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು.
ಅವರು ಸವದತ್ತಿ ಮತಕ್ಷೇತ್ರಾದ್ಯಂತ ಅತ್ಯಂತ ಜನಪ್ರಿಯ ಶಾಸಕರಾಗಿಯೇ ತಮ್ಮ ವರ್ಚಸ್ಸು ಉಳಿಸಿಕೊಂಡವರು. ಪ್ರತಿಯೊಬ್ಬರ ಜೊತೆ ಅತ್ಯಂತ ಆಪ್ತ ಹಾಗೂ ನಿಕಟವಾಗಿ
ಬೇರೆ ಬೆರೆಯುವ ಗುಣ ಸಂಪನ್ನ ವ್ಯಕ್ತಿತ್ವ ಅವರದ್ದಾಗಿತ್ತು.
ಅವರನ್ನು ಪ್ರೀತಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನ ಸಾವಿಗೆ ಕಂಬನಿ ಮಿಡಿದಿದ್ದಾರೆ .
ಆನಂದ ಮಾಮನಿ ಅವರು ಪತ್ನಿ ರತ್ನಾ, ಪುತ್ರಿ ಚೇತನಾ(15), ಪುತ್ರ ಚಿನ್ಮಯ(13)ಅವರನ್ನು ಅಗಲಿದ್ದಾರೆ.
2 ವರ್ಷದ ಹಿಂದೆ ಸೆಪ್ಟೆಂಬರ್ ನಲ್ಲಿ ಕೇಂದ್ರ ಸಚಿವರಾಗಿದ್ದ ಬೆಳಗಾವಿ ಸಂಸದ ಸುರೇಶ ಅಂಗಡಿ, ಕಳೆದ ತಿಂಗಳು ಸಚಿವ ಉಮೇಶ ಕತ್ತಿ ಅವರ ನಂತರ ಇದೀಗ ಆನಂದ ಮಾಮನಿಯವರ ಸಾವು ಬೆಳಗಾವಿ ಜಿಲ್ಲೆಯ ರಾಜಕೀಯ ಕ್ಷೇತ್ರವನ್ನೇ ತಬ್ಬಲಿಯಾಗಿಸಿದೆ ಎನ್ನಬಹುದು.
ಹಲವು ಸವಾಲುಗಳು ಎದುರಾದರೂ ಅವುಗಳನ್ನು ಮೆಟ್ಟಿನಿಂತು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಆನಂದ ಮಾಮನಿ ಅವರಿಗೆ ಸಲ್ಲುತ್ತದೆ. ಸವದತ್ತಿ ಮತಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಆನಂದ ಮಾಮನಿ ಅವರಿಗೆ ಅಭಿಮಾನಿಗಳು ಅಜಾತಶತ್ರು ಎಂದೇ ಕರೆಯುತ್ತಾರೆ. ತಮ್ಮ ಮೃದು ಸ್ವಭಾವದಿಂದ ಆನಂದ ಮಾಮನಿ ಅವರು ಎಲ್ಲರಿಗೂ ಅತ್ಯಂತ ಹತ್ತಿರವಾಗಿದ್ದವರು.
ಮಾಮನಿ ಮನೆತನ ರಾಜಕೀಯ ಕ್ಷೇತ್ರದಲ್ಲಿ ಸವದತ್ತಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿತ್ತು. ಆನಂದ ಮಾಮನಿ ಅವರ ತಂದೆ ದಿವಂಗತ ಚಂದ್ರಶೇಖರ ಮಾಮನಿ ಅವರು ಸಹಾ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದರು. ಅದೇ ಸ್ಥಾನವನ್ನು ಆನಂದ ಮಾಮನಿ ಅಲಂಕರಿಸಿದ್ದರು. ಕಾಕತಾಳೀಯ ಎನ್ನುವಂತೆ ಚಂದ್ರಶೇಖರ ಮಾಮನಿ(1995-99) ಅವರು ಉಪಸಭಾಧ್ಯಕ್ಷರಾಗಿದ್ದ ಅವಧಿಯಲ್ಲೇ ನಿಧನರಾಗಿದ್ದರು. ಇದೀಗ
ಅವರ ಪುತ್ರ ಆನಂದ ಮಾಮನಿ ಅವರು ಸಹ ಉಪಸಭಾಧ್ಯಕ್ಷರಾಗಿದ್ದಲೇ ನಿಧನರಾಗಿದ್ದಾರೆ.
ಆನಂದ ಮಾಮನಿಯವರ ಅನಾರೋಗ್ಯದ ಕುರಿತು ತಿಂಗಳ ಹಿಂದೆಯೇ ವದಂತಿ ಹರಿದಾಡಿತ್ತು. ಆಗ ಅವರು ವಿಡಿಯೋ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದರು. ಆದರೆ ಅಷ್ಟರಲ್ಲೇ ಇದೀಗ ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ಅವರ ಸಾವು ಕ್ಷೇತ್ರದ ಜನತೆಯನ್ನು ಬೆಚ್ಚಿ ಬೀಳಿಸಲು ಕಾರಣವಾಗಿದೆ.
1966 ಜನವರಿ 18 ರಂದು ಜನಿಸಿದ್ದ ಆನಂದ ಮಾಮನಿ ಅವರು ಯರಗಟ್ಟಿ ತಾಲ್ಲೂಕಿನ ರೂವಾರಿ ಎನಿಸಿಕೊಂಡಿದ್ದರು. ಜತೆಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಸವದತ್ತಿ ತಾಲ್ಲೂಕಿನ ಜನಮಾನಸದಲ್ಲಿ ನೆಲೆಯೂರಿದ್ದರು.
1984-90 ಅವಧಿವರೆಗೆ ಹತ್ತಿ ವ್ಯಾಪಾರ ಮಾಡಿಕೊಂಡು ನಂತರ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ಪ್ರತಿ ವರ್ಷ ಎರಡರಿಂದ ಮೂರೂವರೆ ಕೋಟಿ₹ವ್ಯವಹಾರ ಮಾಡುತ್ತಿದ್ದರು.
ಸಚಿವರಾಗಬೇಕು ಎಂಬ ಮಹದಾಸೆ ಹೊಂದಿ ತಮ್ಮನ್ನು ಸಚಿವರನ್ನಾಗಿಸುವಂತೆ ಅವರು ಒತ್ತಾಯಿಸುತ್ತಿದ್ದರು. ಆದರೆ ಅವರಿಗೆ ವಿಧಾನ ಸಭಾ ಉಪಾಧ್ಯಕ್ಷ ಹುದ್ದೆ ದಯಪಾಲಿಸಲಾಗಿತ್ತು.
2008, 2013, 2018 ರಲ್ಲಿ ಸವದತ್ತಿ ಮತಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ.
ಈ ಮೂಲಕ ಅವರು ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದರು.