ಸಿಎಂ, ಡಿಸಿಎಂಗೆ ಶುಭ ಕೋರಿ ಗಮನ ಸೆಳೆದ ಬಿಜೆಪಿ ಶಾಸಕ: ಶಿವರಾಮ್ ಹೆಬ್ಬಾರ್ ಸೋಮಶೇಖರ್ ಗೆ ಬಹಿರಂಗ ಅಹ್ವಾನ ನೀಡಿದ ಸಿಎಂ : ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ
ಶಿರಸಿ : ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದರೆ ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್ .ಟಿ.ಸೋಮಶೇಖರ್ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ರವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮಾಧ್ಯಮದವರೊಂದಿಗೆ ಮಾತನಾಡಿದರು.
*ಬಾಂಬ್ ಸ್ಪೋಟ ಪ್ರಕರಣ ತನಿಖೆ ನಡೆಯುತ್ತಿದೆ*
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟವಾಗಿದೆ. ಇದರ ಬಗ್ಗೆ ಪೊಲೀಸರು, ಸಿಸಿಬಿ ಹಾಗೂ ಎನ್ ಐ ಎಯವರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಸ್ಪೋಟದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿದ್ದು, ಎನ್ ಐ ಎಯವರು ಐವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ ಎಂದರು.
*ದೇಶದ್ರೋಹಿಗಳು ಯಾರು*
ಪಾಕ್ ಪರ ಘೋಷಣೆ ಪ್ರಕರಣದ ಎಫ್ ಎಸ್ ಎಲ್ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿಳಿಸುತ್ತಿಲ್ಲ ಎಂಬ ಬಿಜೆಪಿಯವರ ಟೀಕೆಗೆ ಉತ್ತರಿಸುತ್ತಾ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆಗಳನ್ನು ಕೂಗಿದ್ದರು. ಆಗ ಆ ಸರ್ಕಾರ ಪ್ರಕರಣವನ್ನೇ ವಜಾಗೊಳಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಇದರಿಂದ ಯಾರು ದೇಶದ್ರೋಹಿಗಳು ಎಂದು ತಿಳಿಯುತ್ತದೆ ಎಂದರು.
*ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಶೀಘ್ರ*
ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಘೋಷಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದರು.
*ಅನಂತಕುಮಾರ್ ಹೆಗಡೆಯವರಿಗೆ ಸಂಸ್ಕೃತಿ ಇಲ್ಲ*
ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರು ಮುಖ್ಯಮಂತ್ರಿಗಳನ್ನು ಅಗೌರವದಿಂದ ಮಾತನಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿರುವವರು ಈ ರೀತಿ ಮಾತನಾಡುವುದಿಲ್ಲ. ಜನವಿರೋಧಿಯಾಗಿರುವವರು ಮಾತ್ರ ಈ ರೀತಿ ಮಾತನಾಡುತ್ತಾರೆ. ಅವರಿಗೆ ಸಂಸ್ಕೃತಿ ಇಲ್ಲ. ಅವರು ಮನುವಾದಿ ಹಾಗೂ ಹಿಂದುತ್ವವಾದಿ. ಕೇವಲ ಕಳೆದ 2-3 ತಿಂಗಳಿನಿಂದ ಚುರುಕಾಗಿದ್ದು, ಅವರು ಇಷ್ಟು ದಿನ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆಯಿದ್ದು, ಈ ಬಗ್ಗೆ ಆಯವ್ಯಯದಲ್ಲಿ ಪ್ರಸ್ತಾಪವಿಲ್ಲದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.