ಬೆಳಗಾವಿ: 2006ರ ನಂತರ ನೇಮಕವಾಗಿರುವ ರಾಜ್ಯ ಸರಕಾರಿ ನೌಕರರಿಗೆ ಈಗ ಇರುವ ಹೊಸ ಪಿಂಚಣಿ ಯೋಜನೆ ರದ್ಧುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು ಖಚಿತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಭಾನುವಾರ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ರಾಜ್ಯ ಸರಕಾರಿ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮತ್ತು 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾಗಿ ಭರವಸೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೋ, ಚುನಾವಣೆಯ ನಂತರವೋ ಎನ್ನುವುದಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
ಸರಕಾರಕ್ಕೆ ಒಳ್ಳೆಯ ಹೆಸರು ತರುವುದು ಮತ್ತು ಕೆಟ್ಟ ಹೆಸರು ತರುವುದು ಎರಡೂ ನೌಕರರ ಕೆಲಸದ ಮೇಲೆ ಅವಲಂಭಿಸಿದೆ. ಒಳ್ಳೆಯ ರೀತಿಯಿಂದ ಕೆಲಸ ಮಾಡಿ ಸರಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿದರೆ ಜನರು ಸರಕಾರವನ್ನು ಪ್ರಶಂಸಿಸುತ್ತಾರೆ. ಇಲ್ಲವಾದಲ್ಲಿ ಬೀದಿ ಬೀದಿಗಳಲ್ಲಿ ಸರಕಾರವನ್ನು ಬಯ್ಯುತ್ತಾರೆ. ಹಾಗಾಗಿ ಉತ್ತಮವಾಗಿ ಕೆಲಸ ಮಾಡಿ ಸರಕಾರಕ್ಕೆ ಒಳ್ಳೆಯ ಹೆಸರು ತನ್ನಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.
ಒಳ್ಳೆಯ ಉದ್ದೇಶ ಮತ್ತು ಗುರಿ ಇಟ್ಟುಕೊಂಡು ನೌಕರರ ಸಂಘ ಕೆಲಸ ಮಾಡಬೇಕು. ಸಂಘಟನೆಯಲ್ಲಿ ರಾಜಕೀಯ ತರಬೇಡಿ. ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವರ ವಿಕಾಸಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ. ಸರಕಾರಕ್ಕೆ ಉತ್ತಮ ಹೆಸರು ತರೋಣ ಎಂದ ಹೆಬ್ಬಾಳಕರ್, ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ನನಗೆ ಸದಾ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅವರು ಪಕ್ಷಾತೀತವಾಗಿ ತಮ್ಮ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಈ ಸಮಯದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಉತ್ತರ ಕರ್ನಾಟಕ ಮುಸ್ಲಿಂ ಯುನೈಟೆಡ್ ಫೋರಮ್ ನ ಅಧ್ಯಕ್ಷ ಇಮ್ತಿಯಾಜ ಅಹ್ಮದ್ ಉಮರಶೇಖ್, ರಾಜ್ಯ ಗೌರವಾಧ್ಯಕ್ಷ ಮೊಹ್ಮದ್ ಪಾಷಾ, ಮಿರ್ಜಾ ಅಜ್ಮತುಲ್ಲಾ, ಡಾ. ಯೂಸೂಫ್ ಅಸ್ಲಂಖಾನ್, ಮೈನೂದ್ಧಿನ ಶಿರಹಟ್ಟಿ, ಮುಸ್ಲಿಂ ಸಮಾಜದ ಮುಖಂಡರು, ಮಹಿಳೆಯರು, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿಯ ಪದಾಧಿಕಾರಿಗಳು
ಇದ್ದರು.