ಬೆಳಗಾವಿ : ಜನರ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ನಗರ ಮತ್ತು ಇನ್ನಿತರ ಪ್ರದೇಶಗಳಲ್ಲಿ ಕೆಎಲ್ಇ ಆಸ್ಪತ್ರೆಯನ್ನು ತೆರೆಯಲಾಗುತ್ತಿದೆ. ಈಗಾಗಲೇ ಬೆಳಗಾವಿ ನಗರದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆದು ಜನಸೇವೆಗೆ ಅರ್ಪಿಸಲಾಗಿದೆ. ಈಗ ಉಜ್ವಲ ನಗರದಲ್ಲಿ ಪ್ರಾರಂಭಿಸಿದ್ದು, ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಕರೆ ನೀಡಿದರು.
ಬೆಳಗಾವಿಯ ಉಜ್ವಲ ನಗರದಲ್ಲಿ ಕೆಎಲ್ಇ ಸಂಸ್ಥೆಯು ನೂತನವಾಗಿ ನಿರ್ಮಿಸಿದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಸಮಾಜ ಸುಧಾರಣೆ ಸಾಧ್ಯ. ಅದಕ್ಕನುಗುಣವಾಗಿ ಶಿಕ್ಷಣದ ಜೊತೆಗೆ ಆರೋಗ್ಯ ಕಲ್ಪಿಸುವ ಕಾರ್ಯ ಅದರಲ್ಲಿಯೂ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಸಕಲ ವ್ಯವಸ್ಥೆಯನ್ನುಳ್ಳ ಅತ್ಯಾಧುನಿಕ ಆಸ್ಪತ್ರೆ ಇದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ, ಹೃದಯ, ಲೀವರ್ ಕಸಿ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಶ್ವಾಸಕೋಶ ಕಸಿ ಕೈಗೆಟುಕುವ ದರದಲ್ಲಿ ನೆರವೇರಿಸಲಾಗುತ್ತದೆ. ಇದಕ್ಕಾಗಿಯೇ ಆಸ್ಪತ್ರೆಯ ವೈದ್ಯರೊಬ್ಬರನ್ನು ತರಬೇತಿಗೆ ಅಮೇರಿಕಾಗೆ ಕಳಹಿಸಲಾಗಿದೆ ಎಂದು ತಿಳಿಸಿದರು.
ಪ್ರತಿದಿನ ಸುಮಾರು ಹತ್ತು ರೋಗಿಗಳು ಕ್ಯಾನ್ಸರ್ ನಿಂದ ಬಳಲುತ್ತಿರುವದು ಕಂಡು ಬರುತ್ತಿರುವದರಿಂದ ಬೆಳಗಾವಿಯಲ್ಲಿ ೩೦೦ ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊಂದಿರುವ ಆಸ್ಪತ್ರೆಯು ಶೀಘ್ರದಲ್ಲಿಯೇ ಜನಸೇವೆಗೆ ಅರ್ಪಿತವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ಸಂಸ್ಥೆಯ ಆಸ್ಪತ್ರೆಯಲ್ಲಿ ಯಾವುದೇ ಜಾತಿ ಧರ್ಮ ನೋಡದೇ ಸಕಲರಿಗೆ ಶಿಕ್ಷಣ ಹಾಗೂ ಚಿಕಿತ್ಸೆ ನೀಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ, ಜೀವನ ಶೈಲಿ ಬದಲಾವಣೆಯಿಂದ ರೋಗಗಳು ಅಧಿಕಗೊಳ್ಳುತ್ತಿವೆ. ಆದ್ದರಿಂದ ಪರ್ಯಾಯ ವ್ಯವಸ್ಥೆಯಡಿ ಆಯುರ್ವೇದ, ಹೋಮಿಯೋಪತಿ ಆಸ್ಪತ್ರೆ. ತೆರೆಯಲಾಗಿದೆ. ಅಲ್ಲದೇ ಮನೆಬಾಗಿಲಿಗೆ ಬಂದು ರೋಗಿಗಳ ಸೇವೆಯನ್ನು ಮಾಡಲಾಗುತ್ತಿದೆ. ಎಲ್ಲರೂ ಆರೋಗ್ಯದಿಂದ ಇರಿ ಎಂದು ಸಲಹೆ ನೀಡಿದರು.
ಶಾಸಕ ರಾಜು (ಆಸಿಫ್) ಸೇಠ ಮಾತನಾಡಿ, ಡಾ. ಕೋರೆ ಅವರ ದೂರದೃಷ್ಟಿ ಅಗಾಧವಾದದ್ದು. ಬಹಳ ದಿನಗಳಿಂದ ನಮಗೆ ಕೆಎಲ್ಇ ಆಪದ್ಬಾಂಧವ. ಆಸ್ಪತ್ರೆ ಎಂದರೆ ಭಯಬೇಡ. ೨೦೧೩ರಲ್ಲಿ ನನಗೆ ಗಂಭೀರ ಪರಿಸ್ಥಿತಿ ಎದುರಾಗಿತ್ತು. ತುರ್ತು ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು. ಎಲ್ಲರೂ ಮುಂಬೈ, ಬೆಂಗಳೂರು, ಹೈದರಾಬಾದ್, ಅಮೇರಿಕಾಗೆ ಹೋಗುವಂತೆ ಸಲಹೆ ನೀಡಿದರು. ಆದರೆ ಡಾ. ಕೋರೆ ಅವರು ಇಲ್ಲಿಯೇ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈಗ ನಾನು ಗುಣಮುಖಗೊಂಡು ನಿಮ್ಮ ಮುಂದೆ ಇದ್ದೇನೆ. ಇದನ್ನು ಹೇಳುವ ಉದ್ದೇಶ ಏನೆಂದರೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಲಭಿಸುತ್ತಿದೆ ಎಂದರ್ಥ ಎಂದು ಪ್ರಶಂಸಿಸಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಡಾ. ಎಸ್ ವಿ ಸಾಧುನವರ, ಕಾಹೆರ್ ಉಪಕುಲಪತಿ ಡಾ. ನಿತಿನ ಗಂಗಾನೆ ಉಪಸ್ಥಿತರಿದ್ದರು. ಕಾಹೆರ್ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಡಾ.ವಿ.ಡಿ. ಪಾಟೀಲ, ಡಾ. ಹೆಚ್ .ಬಿ.ರಾಜಶೇಖರ, ಉಪಪ್ರಾಚಾರ್ಯ ಡಾ. ವಿ.ಎಂ. ಪಟ್ಟಣಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವೈದ್ಯಕೀಯ ಅಧೀಕ್ಷಕ ಡಾ. ಆರಿಫ್ ಮಾಲ್ದಾರ ಸ್ವಾಗತಿಸಿದರು. ಜೆಎನ್ಎಂಸಿ ಉಪಪ್ರಾಚಾರ್ಯ ಡಾ. ರಾಜೇಶ ಪವಾರ ವಂದಿಸಿದರು.