ಹೊನ್ನಾವರ :
ಮಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಬಸ್ಸಿನಡಿ ಆಕ್ಟಿವಾ ಹೊಂಡಾ ಸಿಲುಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ-ಮಗಳು ಮೃತಪಟ್ಟ ಘಟನೆ ಮಂಕಿಯ ಗುಳದಕೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
ಮುರ್ಡೇಶ್ವರದ ಮಾವಳ್ಳಿಯ ನಾಡವರಕೇರಿ ನಿವಾಸಿ ಸವಿತಾ ರಾಜು ಆಚಾರಿ(40) ಮತ್ತು ಮಗಳು ಅಂಕಿತಾ(17) ಮೃತರು.
ಮಂಕಿ ಜಾತ್ರೆಗೆಂದು ಸಾರಸ್ವತ ಕೇರಿಯ ತಾಯಿ ಮನೆಗೆ ಮಗಳೊಂದಿಗೆ ಸವಿತಾ ಬಂದಿದ್ದರು.ಜಾತ್ರೆ ಪೇಟೆಯಿಂದ ವಾಪಸ್ಸಾಗುವಾಗ ತಾಯಿ-ಮಗಳು ಎಕ್ಟಿವಾ ಹೊಂಡಾ ದ್ವಿಚಕ್ರವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿಹೊಡೆದಿದೆ. ಆಕ್ಟಿವಾ ಹೊಂಡಾ ಸಿಲುಕಿ ನಜ್ಜುಗುಜ್ಜಾಗಿದೆ. ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಬಸ್ ಡಿವೈಡರ್ ಹತ್ತಿದೆ.
ಗಂಭೀರ ಗಾಯಗೊಂಡ ತಾಯಿ-ಮಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಬಸ್ ಚಾಲಕ ಸವದತ್ತಿಯ ಫಕೀರಪ್ಪ ಬಸಪ್ಪ ವಿರುದ್ದ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.