ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಹಾಗೂ ಚಿಕ್ಕೋಡಿ ಕ್ಷೇತ್ರಕ್ಕೆ ಮೂವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡಿಗೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಹೆಸರು ಪಟ್ಟಿ ಮಾಡಿ ವರಿಷ್ಠರಿಗೆ ಕಳಿಸುವುದಷ್ಟೆ ನನ್ನ ಡ್ಯೂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಕುಟುಂಬದ ಯಾವ ಸದಸ್ಯರೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಸ್ಥಾನಗಳಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಹೆಚ್ಚು ಜನಪ್ರಿಯತೆ ಗಳಿಸಿರುವ ಇಬ್ಬರು ಉತ್ತಮ ಅಭ್ಯರ್ಥಿಗಳನ್ನು ಪಕ್ಷದ ಸ್ಥಳೀಯ ಘಟಕ ಆಯ್ಕೆ ಮಾಡುತ್ತದೆ. ಆದರೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸಮುದಾಯದಲ್ಲಿ ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿಯೂ ಜನಪ್ರಿಯರಾಗಬೇಕು ಎಂದು ಹೇಳಿದರು.
ಕುಟುಂಬಕ್ಕಿಂತ ಪಕ್ಷ ಗೆಲುವು ಮುಖ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ತೋರಿಸಿದರೆ ಅವರ ಪುತ್ರನಿಗೆ ಟಿಕೆಟ್ ನೀಡಲಾಗುವುದು ಎಂದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯಾಗಲಿ ಸ್ಪರ್ಧೆ ಮಾಡುವುದಿಲ್ಲ. “ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತೇವೆ. ಅಲ್ಲದೇ ನಮ್ಮ ಕ್ಷೇತ್ರದಲ್ಲಿ ಕುಟುಂಬ ಮುಖ್ಯ ಬರಲ್ಲ. ಇಲ್ಲಿ ಏನೆ ಇದ್ದರೂ ಗೆಲ್ಲುವುದೊಂದೆ ಮುಖ್ಯ ಎಂದು ಹೇಳಿದರು.
ಅಪಘಾತ ತಡೆಯಲು ಜಾಗೃತಿ ಅಗತ್ಯ: ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 25 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಅಪಘಾತ ತಡೆಗಟ್ಟಲು ಪೂಲೀಸ್ ಇಲಾಖೆ, ಆರ್ಟಿಒ ಅಧಿಕಾರಗಳು ಜಂಟಿಯಾಗಿ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆ ಇರುತ್ತದೆ. ಸರ್ವಿಸ್ ರಸ್ತೆಗಳು ಇರುತ್ತವೆ. ಆದರೆ ರಾಜ್ಯ ಹೆದ್ದಾರಿ, ಸ್ಥಳೀಯ ರಸ್ತೆಗಳಲ್ಲಿ ಹಾಗಲ್ಲ. ಆದ್ದರಿಂದ ಅಪಘಾತ ತಡೆಯಲು ಎಲ್ಲರೂ ಜಾಗೃತರಾಗಬೇಕೆಂದು ತಿಳಿಸಿದರು.