ಪ್ರಾ.ಬಿ.ಎಸ್.ಗವಿಮಠ ಸಮಗ್ರ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಅಭಿಮತ
ಬೆಳಗಾವಿ :
ಕೆಎಲ್ಇ ಸಂಸ್ಥೆಯ ಎಂದರೆ ತ್ಯಾಗದ ತಾಜಮಹಲು; ಮಾನವೀಯತೆಯ ತಾಜಮಹಲು. ನೂರು ವರ್ಷಗಳ ಹಿಂದೆ ಮ್ಯಾಟ್ರಿಕ್ ಪಾಸಾದವರು ಡೆಪ್ಯುಟಿ ಕಲೆಕ್ಟರ್ ಆಗುತ್ತಿದ್ದರು, ಆದರೆ ಕೆಎಲ್ಇ ಕಟ್ಟಿದ ಸಪ್ತರ್ಷಿಗಳು ಸ್ನಾತಕೋತ್ತರ ಪದವೀಧರರೆನಿಸಿ ಹೈಸ್ಕೂಲು ಮಾಸ್ತರರಾಗಿ ಕೆಎಲ್ಇ ಸಂಸ್ಥೆಯ ಮೂಲಕ ಸಮಾಜ ಕಟ್ಟಿದರು, ಭಾಷೆಗೆ ಶಕ್ತಿ ತುಂಬಿದರು ಎಂದು ಖ್ಯಾತ ವಾಗ್ಮಿ ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಅಭಿಪ್ರಾಯಪಟ್ಟರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತ್ಯಭೂಷಣ ಪ್ರಾ. ಬಿ.ಎಸ್.ಗವಿಮಠರ ಸ್ನೇಹಿತರು ಹಾಗೂ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಪ್ರಾ.ಬಿ.ಎಸ್.ಗವಿಮಠ ಸಮಗ್ರ ಸಾಹಿತ್ಯ ಚಿಂತನ’ದ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇಂದು ಕೆಎಲ್ಇ ಸಂಸ್ಥೆಗೆ ನೂರಕ್ಕೂ ಅಧಿಕ ವರ್ಷಗಳು. ಆ ನೂರರ ತಾಯಿಯ ಇತಿಹಾಸವನ್ನು ಕಟ್ಟಿಕೊಟ್ಟವರು ಪ್ರಾಚರ್ಯ ಬಿ.ಎಸ್. ಗವಿಮಠರು. ಇತಿಹಾಸ ಕಟ್ಟಿಕೊಟ್ಟು ಗವಿಮಠರು ಇತಿಹಾಸದ ಭಾಗವೇ ಆಗಿದ್ದಾರೆ. ಇಂಥವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಅವರ ಋಣ ತೀರಿಸಬೇಕು ಎಂದು ಹೇಳಿದರು.
ಪ್ರಾ.ಬಿ.ಎಸ್.ಗವಿಮಠರ ಸಾಹಿತ್ಯ ಕೃತಿಗಳ ವಿಮರ್ಶಾ ಗೋಷ್ಠಿಯಲ್ಲಿ ಡಾ.ಪ್ರಜ್ಞಾ ಮತ್ತಿಹಳ್ಳಿಯವರು ಕೆಎಲ್ಇ ಇತಿಹಾಸ “ನೂರರ ಸಿರಿಬೆಳಕು” ಕೃತಿ ಕುರಿತು ಮಾತನಾಡಿ ಮರೆತು ಹೋಗಬಹುದಾಗಿದ್ದ ಇತಿಹಾಸವನ್ನು ರೋಚಕವಾಗಿ ಕಟ್ಟಿಕೊಟ್ಟ ಬಿ.ಎಸ್. ಗವಿಮಠರ ಪರಿಶ್ರಮ ಸಾರ್ಥಕಗೊಂಡಿದೆ ಎಂದು ಹೇಳಿದರು.
ಕೆಎಲ್ಇ ಕಟ್ಟಿದವರು ಉದ್ಯಮಿಗಳಲ್ಲ, ಬಂಡವಾಲುಶಾಹಿಗಳಲ್ಲ ಬದಲಿಗೆ ಜನಸಾಮಾನ್ಯರು ನೀಡಿದ ದಾನದ ಹಣವನ್ನು ಸದ್ಬಳಕೆ ಮಾಡಿಕೊಂಡು ಸಂಸ್ಥೆ ಕಟ್ಟಿದರು. ಡಾ.ಫ.ಗು.ಹಳ್ಳಿಕಟ್ಟಿಯವರು ವಚನ ಸಾಹಿತ್ಯವನ್ನು ಸಂಶೋಧಿಸಿ ಬೆಳಕಿಗೆ ತಂದರು. ಅವರಿಂದ ವಚನ ಸಾಹಿತ್ಯ ಜೀವಂತವಾಗಿ ಉಳಿಯಿತು. ಅಂತೆಯೇ ಪ್ರಾ.ಬಿ.ಎಸ್.ಗವಿಮಠರು ಕೆಎಲ್ಇ ಇತಿಹಾಸವನ್ನು ಸಂಶೋಧಿಸಿ, ಇತಿಹಾಸ ದಾಖಲಾಗುವಂತೆ ಮಾಡಿದರು. ಇಲ್ಲದಿದ್ದರೆ ಕೆಎಲ್ಇ ಇತಿಹಾಸ ರಚನೆಗೊಳ್ಳುತ್ತಿರಲಿಲ್ಲ. ಸಮಾಜಕ್ಕೆ ಗೊತ್ತೂ ಆಗುತ್ತಿರಲಿಲ್ಲ. ಅದರ ಶ್ರೇಯಸ್ಸು ಗವಿಮಠರಿಗೆ ಸಲ್ಲಬೇಕೆಂದರು.
ಜಯಶ್ರೀ ಎ.ಎಂ. ಅವರು ಗವಿಮಠರ ಕಾವ್ಯದ ಕುರಿತು ಮಾತನಾಡಿ ಅವರ ಪ್ರತಿಯೊಂದು ಕವನ ಒಂದು ಸಂದೇಶ ನೀಡುತ್ತದೆ ಎಂದು ಹೇಳಿದರು. ಡಾ.ಭಾರತಿ ಮಠದ ಅವರು ಗವಿಮಠರ ವೈಚಾರಿಕ ಸಾಹಿತ್ಯದ ಕುರಿತು ಮಾತನಾಡಿದರು.
ಕಾದಂಬರಿಕಾರ ಯ.ರು.ಪಾಟೀಲರು ಗವಿಮಠರು ಕಟ್ಟಿ ಬೆಳೆಸಿದ ಸಂಘಸಂಸ್ಥೆಗಳ ಕುರಿತು ಮಾತನಾಡಿದರು.
ಎರಡನೇ ಗೋಷ್ಠಿಯಲ್ಲಿ ಗವಿಮಠರು ಬರೆದ ಜೀವನ ಚರಿತ್ರೆಗಳ ಕುರಿತು ಮಾತನಾಡಿದ ಡಾ.ಪಿ.ಜಿ.ಕೆಂಪಣ್ಣವರ ಏಣಗಿ ಬಾಳಪ್ಪನವರ ಚರಿತ್ರೆ, ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ಜೀವನ ಚರಿತ್ರೆಗಳು ಸ್ವಾತಂತ್ರ್ಯಪೂರ್ವ ಕಾಲದ ಇಲ್ಲಿನ ಕನ್ನಡಿಗರ ಅಭಿಮಾನ, ಹೋರಾಟ, ಛಲಗಳ ರಸವತ್ತಾದ ಚಿತ್ರಣಗಳಾಗಿವೆ ಎಂದು ಹೇಳಿದರು.
ಪ್ರಾ.ಗವಿಮಠರ ಅನುವಾದ ಸಾಹಿತ್ಯ ಕುರಿತು ಡಾ.ಎ.ಬಿ.ಘಾಟಗೆ ಮಾತನಾಡಿ ಗವಿಮಠರ ಕೃತಿಗಳು ಅನುವಾದಿತ ಕೃತಿಗಳೆನಿಸಿದೆ ಮೂಲ ಕನ್ನಡ ಕೃತಿಗಳಂತೆ ಬಂದಿರುವದು ಗವಿಮಠರ ಉಭಯಭಾಷಾ ಪಾಂಡಿತ್ಯಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು.
ಖ್ಯಾತ ನಾಟಕಕಾರ ಶ್ರೀ ಶಿರೀಷ ಜೋಶಿ ಗವಿಮಠರ ಸಂಪಾದಿತ ಕೃತಿಗಳ ಕುರಿತು ಮಾತನಾಡಿ ಅವುಗಳ ವಿಶಿಷ್ಠತೆಯನ್ನು ನಿರೂಪಿಸಿದರು. ಕೆಎಲ್ಇ ಪ್ರಸಾರಾಂಗದ ನಿರ್ದೇಶಕ ಡಾ.ಮಹೇಶ ಗುರನಗೌಡರ ಮಾತನಾಡಿ ಗವಿಮಠರು ಕೆಎಲ್ಇ ಪ್ರಸಾರಾಂಗ, ಕೆಎಲ್ಇ ವಾರ್ತಾಪತ್ರಿಕೆ ಕಟ್ಟಿ ಬೆಳೆಸಿದ್ದು, ಶತಮಾನೋತ್ಸವದ ಸಂದರ್ಭದಲ್ಲಿ ನೂರು ಗ್ರಂಥಗಳ ಪ್ರಕಟಣೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಬಣ್ಣಿಸಿದರು. ಖ್ಯಾತ ರಂಗ ಚಿಂತಕ ಡಾ.ರಾಮಕೃಷ್ಣ ಮರಾಠೆ ಮಾತನಾಡಿ ಗವಿಮಠರ ರಂಗಭೂಮಿ ಸೇವೆಯನ್ನು ಗುರುತಿಸಿಕೊಟ್ಟರು.
ಪೂಜ್ಯ ನಾಗನೂರು ಶ್ರೀಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಲವತ್ತಕ್ಕೂ ಅಧಿಕ ಸಾಹಿತಿಗಳ, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ.ಸಿ.ಜಿ.ಮಠಪತಿ ಸ್ವಾಗತಿಸಿದರು, ಶುಭಮ್ ಮಂಗಸೂಳಿ ಪ್ರಾರ್ಥಿಸಿದರು. ಬಸವರಾಜ ಗಾರ್ಗಿ, ಡಾ.ಮಹೇಶ ಗುರನಗೌಡರ ನಿರೂಪಿಸಿದರು.