ದೆಹಲಿ :
ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಕುರಿತು ಪ್ರಧಾನಿ ಮೋದಿ ಅವರು ಟ್ವಿಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಕೂಡ ಅವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ. ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು, ಅವರ ಸಂಸದೀಯ ಕಾರ್ಯ ಆದರ್ಶಪ್ರಾಯವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಸ್ವತಃ ಮೋದಿ ಘೋಷಣೆ :
ಭಾರತದ ಮಾಜಿ ಉಪ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
ಈ ಮಾಹಿತಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದು ‘ಶ್ರೀ ಎಲ್ ಕೆ ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು, ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮಾರಕವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಜೀವನ ಅವರದು. ಅವರು ನಮ್ಮ ಗೃಹ ಮಂತ್ರಿ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಅನುಕರಣೀಯ ಮತ್ತು ಶ್ರೀಮಂತ ಒಳನೋಟಗಳಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.
ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್ ನಲ್ಲಿ ಅಂದರೆ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ನವೆಂಬರ್ 8, 1927ರಲ್ಲಿ ಜನಿಸಿದ ಅಡ್ವಾಣಿ, ಬಳಿಕ 1941 ತನ್ನ 14ನೇ ವಯಸ್ಸಿನಲ್ಲಿ ಆರ್ಎಸ್ಎಸ್ಗೆ ಸೇರ್ಪಡೆಗೊಂಡರು. 1947ರಲ್ಲಿ ಕರಾಚಿ ಯುನಿಟ್ಗೆ ಕಾರ್ಯದರ್ಶಿಯಾದರು.
ಜನಸಂಘದ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದ ಲಾಲ್ ಕೃಷ್ಣ ಅಡ್ವಾಣಿ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೂಡಿ ಬಿಜೆಪಿಯನ್ನು ಕಟ್ಟಲು ದಶಕಗಳ ಕಾಲ ಹಗಲಿರುಳು ದೇಶಾದ್ಯಂತ ಸುತ್ತಾಡಿದ್ದಾರೆ. ಬಿಜೆಪಿಯಲ್ಲಿ ಏನೂ ಇಲ್ಲದಿದ್ದಾಗ ಪಕ್ಷವನ್ನು ಕಟ್ಟುವುದರ ಜತೆಗೆ ಪ್ರತಿ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರಗಳು ಬರುವ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಿದ್ದು ಇದೇ ಅಡ್ವಾಣಿ. ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣ ಹೋರಾಟ ಸೇರಿದಂತೆ ಇನ್ನಿತರೆ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವ, 2002ರಿಂದ 2004ರವರೆಗೆ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಎಲ್ ಕೆ ಅಡ್ವಾಣಿ ಅವರು ತಾವು ಹೊಂದಿದ್ದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. 2014ರ ಬಳಿಕ ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯರಾಗಿದ್ದರು.