ಗಳಿಕೆ ರಜೆ ನಗದೀಕರಣಕ್ಕಾಗಿ ಲಂಚ ಪಡೆಯುತ್ತಿದ್ದ ಬೆಳಗಾವಿ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ PU ಉಪಪ್ರಾಚಾರ್ಯ ಕೆ. ಬಿ. ಹಿರೇಮಠ ಬಂಧನ.
ಲೋಕಾಯುಕ್ತರಿಂದ ನಾಗನೂರ HM ಮದಾಳೆಗೆ ನೆಮ್ಮದಿ, ಕಿರುಕುಳ ನೀಡಿದ KB ಗೆ ಹಿಂಡಲಗಾ ಕಂಬಿ..!
ಬೆಳಗಾವಿ : ಗಳಿಕೆ (EL) ರಜೆ ನಗದೀಕರಣ ಮಾಡಲು ಠರಾವು ಪ್ರತಿ ನೀಡಿದ್ದಕ್ಕಾಗಿ ಲಂಚ ಪಡೆಯುತ್ತಿದ್ದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಬೆಳಗಾವಿಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ, ಪ್ರೌಢ ಶಾಲಾ ವಿಭಾಗದ ಉಪಪ್ರಾಚಾರ್ಯ ಹಾಗೂ ಕಾರ್ಯದರ್ಶಿ ಕೆ. ಬಿ. ಹಿರೇಮಠ ಅವರನ್ನು ಬೆಳಗಾವಿ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಬಂಧಿಸುವಲ್ಲಿ ಇಂದು(ಮಂಗಳವಾರ -23) ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿರುವ ಶ್ರೀಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರಾಜಾರಾಮ ಮದಾಳೆ ಅವರು ತಮ್ಮ ಗಳಿಕೆ ರಜೆ ನಗದೀಕರಣ ಮಾಡುವುದಕ್ಕೆ ಆಡಳಿತ ಮಂಡಳಿಯಿಂದ ಠರಾವು ಪ್ರತಿಯನ್ನು ನೀಡುವುದ್ದಕ್ಕಾಗಿ ಗಳಿಕೆ ರಜೆಯ ಹಣದ ನಗದೀಕರಣ ಮೊತ್ತದ ಶೇ. 25% ರಂತೆ ಒಟ್ಟು 13,150/- ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟು, ಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಫಿರ್ಯಾದಿದಾರರ ಮಧಾಳೆ ಆಪಾದಿತ ಅಧಿಕಾರಿಯ ಲಂಚ ಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 01/2024 ಕಲಂ 7(ಬಿ) ಪಿಸಿ ಕಾಯ್ದೆ 1988 (ತಿದ್ದುಪಡಿ- 2018) ರಡಿಯಲ್ಲಿ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲಿ ಆಪಾದಿತ ಅಧಿಕಾರಿಯು ಇಂದು ದಿನಾಂಕಃ 23/01/2024 ರಂದು ತನ್ನ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಬೆಳಗಾವಿಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ, ಪ್ರೌಢ ಶಾಲಾ ವಿಭಾಗದ ಕಾರ್ಯಾಲಯದಲ್ಲಿ ಫಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು, ಸದರಿ ಉಪಪ್ರಾಚಾರ್ಯ ಹಾಗೂ ಕಾರ್ಯದರ್ಶಿಯಾಗಿರುವ ಕೆ. ಬಿ. ಹಿರೇಮಠ ಬೆಳಗಾವಿ ರವರನ್ನು ಬಂಧಿಸಿ ಜೈಲಿಗಟ್ಟಿ ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಐಪಿಎಸ್ ಹಾಗೂ ಬಿ. ಎಸ್. ಪಾಟೀಲ ಪೊಲೀಸ್ ಉಪಾಧೀಕ್ಷಕ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಆರ್. ಎಲ್. ಧರ್ಮಟ್ಟಿ ಪೊಲೀಸ್ ಇನ್ಸ್ಪೆಕ್ಟರ್, ಅಜೀಜ್ ಕಲಾದಗಿ ಪೊಲೀಸ್ ಇನ್ಸಪೆಕ್ಟರ, ಅನ್ನಪೂರ್ಣ ಹುಲಗೂರ ಪೊಲೀಸ್ ಇನ್ಸಪೆಕ್ಟರ, ಲೋಕಾಯುಕ್ತ ಬೆಳಗಾವಿ ಹಾಗೂ ಸಿಬ್ಬಂದಿಗಳಾದ ರವಿ ಮಾವರಕರ, ಗಿರಿಶ್ ಪಾಟೀಲ, ವಿಠಲ ಬಸಕ್ರಿ, ಸಂತೋಷ ಬೆಡಗ, ಹಾಗೂ ತಂಡದವರಿಂದ ಕೈಗೊಳ್ಳಲಾಗಿತ್ತು.