ಹೊಟೇಲ ಬಿಲ್ ಭಾಗ- ೧
⏩ *ಟೆಂಡರ್ ಮಾಡದೇ ತರಾತುರಿ ಅನುಮತಿ ನೀಡುವ ಅಗತ್ಯವಿತ್ತೇ…?
⏩ *ಅಧಿವೇಶನದಲ್ಲಿ ಪೋಲೀಸರ ಆಹಾರ ಪೂರೈಕೆ ‘ಕಮೀಷನ’ ‘ಸಿದ್ಧ’….!?
⏩ *೧೦ ವರ್ಷದ ಆಹಾರ ಪೂರೈಕೆ ಮಾಡಿರುವ ಅನುಭವ ಖೊಟ್ಟಿ ದಾಖಲೆ..!?
⏩ *ಮಾನವ ಸಂಪನ್ಮೂಲ ಪೂರೈಕೆ ಮಾಡೋ ಏಜೆನ್ಸಿ ಆಹಾರ ಪೂರೈಕೆ ಮಾಡಿತೇ..!?
ಅಧಿವೇಶನದ ಹಿನ್ನಲೆಯಲ್ಲಿ ಬೇಕಾಬಿಟ್ಟಿ ಬಿಲ್ ಮಾಡಿರುವ ಹೊಟೇಲ, ಲಾಡ್ಜ್ ಮಾಲಿಕರು ಈಗ ಬಿಲ್ ಪಾಸು ಮಾಡಲು ಅಡ್ಧ ದಾರಿ ಹಿಡಿದಿರುವುದು ಸತ್ಯ. “ಕಮಿಷನ್ ಕಮಟು” ಮಾಲಿಕೆಯಲ್ಲಿ ಜನಜೀವಾಳ ಸರಣಿ ಪ್ರಕಟವಾಗಲಿದೆ. ಗಮನಿಸಿ. – ಸಂಪಾದಕ
ಬೆಳಗಾವಿ ನಗರ ಪೋಲೀಸ ಆಯುಕ್ತರ ಕಚೇರಿಯ ಅಧಿವೇಶನದ ಆಹಾರ ಪೂರೈಕೆ ಮಾಹಿತಿ ಹಕ್ಕುದಾರರು ಮಾಹಿತಿ ಕೇಳಿದರೆ ಅರ್ಧಮರ್ಧ ಮಾಹಿತಿ ನೀಡಿ ಕೈತೊಳೆದುಕೊಳ್ಳುವ ಕಾಯಕ ಮಾಡಿದೆ. ಲಘುಬಗೆಯಿಂದ ಬಿಲ್ಲು ಪಾಸ್ ಮಾಡಿ ತಮ್ಮ ಪಾಲು ಸ್ವೀಕರಿಸಲು ಎದ್ದುಗಾಲಿನ ಮೇಲೆ ಸಿದ್ಧರಾಗಿರುವ ನೋಟ ಮಾಹಿತಿಯನ್ನು ‘ಜನ ಜೀವಾಳ’ ಕ್ಕೆ ಮಾಹಿತಿ ಹಕ್ಕುದಾರ ಚನ್ನಪ್ಪ ವಗ್ಗನ್ನವರ ಬಿಡುಗಡೆಗೊಳಿಸಿದ್ದಾರೆ.
ಅವರು ಬಿಡುಗಡೆಗೊಳಿಸಿದ ಪ್ರತಿ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೋಲೀಸ್ ಆಯುಕ್ತರ ಕಾರ್ಯಾಲಯ ಕೆಲ ಮಾಹಿತಿಗಳಲ್ಲಿ ಸ್ಪಷ್ಟತೆ ನೀಡದಿರುವುದು ಅನುಮಾನಕ್ಕೆಡೆ ಮಾಡಿದೆಯೆಂದು ಮಾಹಿತಿ ಹಕ್ಕುದಾರರು ನೇರ ಆರೋಪಿಸಿದ್ದಾರೆ.
2023 ರ ಡಿಸೆಂಬರನಲ್ಲಿ ಜರುಗಿದ ಅಧಿವೇಶನದಲ್ಲಿ ಪೊಲೀಸ್ ಬಂದೋಬಸ್ತಗೆ ಬಂದವರಿಗೆ ಒಟ್ಟು ವೆಚ್ಚವಾಗಿದ್ದು ಬರೊಬ್ಬರಿ 3,26,23,668/- ಕೋಟಿ.
*ಆಹಾರ ಸುರಕ್ಷತಾ ಇಲಾಖೆಯಿಂದ ಪರವಾಣಿಗೆ ಪತ್ರ ಇಲ್ಲದ ಏಜೆನ್ಸಿಗೆ ನೀಡಿದರಾ ಆಹಾರ ಪೂರೈಕೆ ಗುತ್ತಿಗೆ?
ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯನ್ವಯ ಈ 2023-24 ರ ಅಧಿವೇಶನಕ್ಕೆ ಒಟ್ಟು 4 ಕ್ಯಾಟರಿಂಗ್ ಗಳು ಆಹಾರ ಪೂರೈಸಿವೆ. ಅವರು ನೀಡಿರುವ ಮಾಹಿತಿಯಲ್ಲಿ ಮಾಹಿತಿ ಹಕ್ಕುದಾರರಿಗೆ ಕಣ್ಣಿಗೆ ಮಣ್ಣೆರಚುವಂತೆ ಎರಡು ಬಾರಿ ಒಂದೇ ಏಜೆನ್ಸಿಯಾದ “ಮೆ. ಗ್ಲೊಬಲ್ ಹೆಚ್.ಆರ್. ಟ್ಯಾಲಂಟ್ ಕನ್ಸಲ್ಟನ್ಸಿ ಸರ್ವಿಸ್” ನಮೂದಿಸಿ ಮಾಹಿತಿ ನೀಡಿದ್ದು ಗೋಲಮಾಲ್ ಎದ್ದುಕಂಡಿದೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಾನವ ಸಂಪನ್ಮೂಲ ಪೂರೈಕೆ ಮಾಡುವ ಒಂದು ಕನ್ಸಲ್ಟನ್ಸಿ ಆಹಾರ ಪೂರೈಕೆ ಮಾಡಬಹುದೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಸಂಬಂಧ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಏಜೆನ್ಸಿ ಅಧಿವೇಶನಕ್ಕೂ ಮುನ್ನ ಪರವಾಣಿಗೆ ಪಡೆದಿದ್ದಾರೆಂದು ‘ಜನಜೀವಾಳ’ ಕ್ಕೆ ತಿಳಿಸಿದ್ದಾರೆ.
ಪೋಲೀಸ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಇವರಿಗೆ ಕನಿಷ್ಠ 10 ವರುಷಗಳ ಅನುಭವವಿದೆಯೆಂದು ಲಿಖಿತವಾಗಿ ತಿಳಿಸದೇ ಮೌಖಿಕವಾಗಿ ತಿಳಿಸಿರುವುದು ಸಂಶಯಕ್ಕೆಡೆ ಮಾಡಿದೆ.
2021 ಸಾಲಿನಲ್ಲಿ 6 ಕ್ಯಾಟರಿಂಗ್ ಗಳಿಗೆ ಟೆಂಡರ ನೀಡಿ 2,49,68,705/- ಕೋಟಿ ಖರ್ಚುಮಾಡಿದೆ. 2022 ರಲ್ಲಿ ಬರಿಯ ಮೂರು ಕ್ಯಾಟರಿಂಗ್ ಗಳಿಗೆ 2,38,86,917/- ಕೋಟಿ ರೂ ಪಾವತಿಸಿದೆ.
ಪ್ರಸಕ್ತ 2023 ಅಧಿವೇಶನದ ಆಹಾರ ಪೂರೈಕೆ ವೆಚ್ಚ ತುಲನೆ ಮಾಡಿದಾಗ ಈ ಬಾರಿ ಒಂದು ಕೋಟಿ ಅಧಿಕ ವೆಚ್ಚವಾಗಿದೆ. ಈ ಬಾರಿಯೂ ಮೂರೇ ಕ್ಯಾಟರಿಂಗ್ ಹೆಸರನ್ನು ತೋರಿಸದೇ ನಾಲ್ಕು ಹೆಸರನ್ನು ನಮೂದಿಸಿ ಮಾಹಿತಿ ಕೊಟ್ಟಿದ್ದಾರೆ. ಅದರಲ್ಲೂ ಗ್ಲೋಬಲ್ ಹೆಚ್. ಆರ್. ಟ್ಯಾಲೆಂಟ ಕನ್ಸಲ್ಟನ್ಸಿ ಹೆಸರೇ ಎರಡು ಬಾರಿ ನಮೂದಾಗಿರುವುದು. ಇದು ಕೂಡ ಟೆಂಡರ್ ಕರೆಯದೇ ತರಾತುರಿಯಲ್ಲಿ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
*ಪರವಾಣಿಗೆ ಪತ್ರ ಇಲ್ಲದೇ ಇತರ ಕಾರ್ಯಕ್ರಮಗಳಿಗೂ ಆಹಾರ ಪೂರೈಸಿದ್ದರ ಹಿಂದಿದೆಯೇ ಸುವಾಸನೆ….!?
ಗಣೇಶ ಚತುರ್ಥಿ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಇದೇ ಏಜೆನ್ಸಿ ಆಹಾರ ಪೂರೈಕೆ ಮಾಡಿದೆ. ಪೋಲೀಸ ಆಯುಕ್ತರ ಕಚೇರಿಯೇ ನೀಡಿರುವ ಮಾಹಿತಿಯಲ್ಲಿ ಪರವಾಣಿಗೆ ಪತ್ರ ಅವರ ಕಚೇರಿಯಲ್ಲಿ ಇಲ್ಲದಿರುವುದನ್ನು ತಿಳಿಸಿರುವುದು ಕೂಡ ಹಾಸ್ಯಾಸ್ಪದವೆನಿಸಿದೆ.
ಯಾವುದೇ ಟೆಂಡರ ನೀಡುವ ಮೊದಲು ಅಗತ್ಯ ಸುರಕ್ಷಿತಾ ಕ್ರಮ ವಹಿಸದೇ ಬಂದೋಬಸ್ತಗೆ ಬಂದ ಪೋಲೀಸರಿಗೆ ಆಹಾರ ಪೂರೈಕೆ ಮಾಡಿಸಲಾಗಿದೆ. ಅಂತೆಯೇ ಅಧಿವೇಶನ ಸಮಯದಲ್ಲಿ ಕೆಲ ಪೋಲೀಸ ಸಿಬ್ಬಂದಿ ವಾಂತಿ ಭೇದಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇದಕ್ಕೆ ಪುಷ್ಠಿ ನೀಡಿದೆ.
ಒಟ್ಟಾರೆ, ತರಾತುರಿಯಲ್ಲಿ ಬೇಕಾಬಿಟ್ಟಿ ಏಜೆನ್ಸಿಗೆ ಆಹಾರ ಪೂರೈಕೆ ಹೊಣೆ ಹೊರಿಸಿ ಈಗ ಅಧಿಕ ವೆಚ್ಚದ ಬಿಲ್ಲ ಕೂಡ ಪಾಸ್ ಮಾಡುವ ಸನ್ನಿಹಿತದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರು ಇದ್ದಾರೆಂಬುದು ಮಾಹಿತಿ ಹಕ್ಕುದಾರ ಚನ್ನಪ್ಪ ವಗ್ಗನ್ನವರ ‘ಜನ ಜೀವಾಳ’ ಕ್ಕೆ ತಿಳಿಸಿದ್ದಾರೆ.