ಬೆಳಗಾವಿ ಬೆಲ್ಲದ
ಬೆಳಗಾವಿ :
ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ವಿದ್ಯಾರ್ಥಿ
ಒಕ್ಕೂಟ, ಉಚಿತ ಕಾನೂನು ಸೇವೆ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಶನಿವಾರ ನಗರದ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಕಾಲೇಜು ಸೆಂಟ್ರಲ್ ಹಾಲ್ನಲ್ಲಿ ನಡೆಯಿತು.
ಬೆಳಗಾವಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ
ರಾಚೋಟಿ ಎಂ.ಶಿರೂರ
ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾನೂನು ಕೋರ್ಸ್ ಅನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಾನೂನು ವೃತ್ತಿಯ ಮಹತ್ವವನ್ನು ಒತ್ತಿ ಹೇಳಿದರು.
ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಯಶಸ್ಸನ್ನು ಸಾಧಿಸಬೇಕು. ಕಾನೂನು ವೃತ್ತಿ ಶಿಕ್ಷಣದಲ್ಲಿ ಬದಲಾವಣೆಗಳನ್ನು ತಂದಿದೆ. ಪ್ರಸ್ತುತ ಯುಗದಲ್ಲಿ ಕಾನೂನು ಪದವೀಧರರಿಗೆ ಲಭ್ಯವಿರುವ ವಿವಿಧ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಶ್ರಮವಹಿಸಿ ದುಡಿದು ಈ ಉದಾತ್ತ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬೇಕು. ಎಷ್ಟೇ ಬುದ್ಧಿಶಕ್ತಿ ಇದ್ದರೂ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಿದರು.
ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನ್ಯಾಯವಾದಿ ಆರ್.ಬಿ.ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ,
ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಜಾಗತೀಕರಣವು ಕಾನೂನು ಪದವೀಧರರಿಗೆ ಅನೇಕ ಮಾರ್ಗಗಳನ್ನು ತೆರೆದಿದೆ ಎಂದು ಹೇಳಿದರು.
ಸುನಂದಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಯಸಿಂಹ ಸ್ವಾಗತಿಸಿ, ಪರಿಚಯಿಸಿದರು.
ವಿದ್ಯಾರ್ಥಿ ಕಾರ್ಯದರ್ಶಿ ಅಂತಿಮ ವರ್ಷದ ವಿದ್ಯಾರ್ಥಿ ವಿನಯ ಪೂಜಾರ ವಂದಿಸಿದರು. ಬಿಎಎಲ್ ಎಲ್ ಬಿ ವಿದ್ಯಾರ್ಥಿಗಳಾದ ಅನುಷಾ ಮತ್ತು ಆಕಾಶ್ ನಿರೂಪಿಸಿದರು.
ಈ ಸಂದರ್ಭದಲ್ಲಿ 2023 ನೇ ಸಾಲಿನಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡ ಶ್ರೀಮತಿ ಕವಿತಾ ಹಿರೇಮಠ, ಶ್ರೀಮತಿ ಗೋಪಿಕಾ ಹೊಸಮನಿ ಮತ್ತು ಅಕ್ಷಯ ವಾಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.