ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್
ಅವರ ಇಡೀ ಪರಿವಾರವೇ ಆ ಪಕ್ಷದಲ್ಲಿ ಗುರುತಿಸಿಕೊಂಡಿದೆ. ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ
ಆ ಪಕ್ಷದ ಬಲಾಢ್ಯ ಸವಾಲನ್ನು ಮೆಟ್ಟಿ ನಿಂತಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ದಿನೇ ದಿನೇ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಪಕ್ಷಕ್ಕೆ ಗತಕಾಲ ವೈಭವವನ್ನು ಮರಳಿ ತರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸಿನ ಗೆಲುವಿನ ರೂವಾರಿ ಎನ್ನುವುದನ್ನು ಅವರು ಕಾಲಕಾಲಕ್ಕೆ ಸಾಬೀತುಪಡಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿ ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಗೆಲ್ಲಿಸಿಕೊಂಡು ಮೇಲ್ಮನೆಗೆ ಆರಿಸಿ ತಂದಿದ್ದಾರೆ. ಜತೆಗೆ ತಮ್ಮ ಸುಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಜಿಲ್ಲಾ ರಾಜಕೀಯದಲ್ಲಿ ಪಳಗಿಸಿ ಭವಿಷ್ಯದ ನಾಯಕನನ್ನಾಗಿ ಬೆಳೆಸುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಪ್ರಭಾವಿ ಹಾಗೂ ಜನಪ್ರಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕಾರ್ಯಕ್ಷೇತ್ರ ಈಗ ತಮ್ಮ ಮತಕ್ಷೇತ್ರಕ್ಕೆ ಹಾಗೂ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಅವರು ರಾಜ್ಯಮಟ್ಟದ ಪ್ರಭಾವಿ ನಾಯಕಿಯಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಭವಿಷ್ಯದ ಆಶಾಕಿರಣವಾಗಿರುವ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಂಚೂಣಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ವಾರದ ಹಿಂದಷ್ಟೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಬೆಳಗಾವಿಯ ಈ ಪ್ರಭಾವಿ ನಾಯಕಿ ರಾಷ್ಟ್ರ ನಾಯಕಿಯ ಜತೆ ಜತೆಗೆ ಹೆಜ್ಜೆ ಹಾಕಿ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಸೋನಿಯಾ ಗಾಂಧಿ ಅವರು ಪಾದಯಾತ್ರೆಯಲ್ಲಿ ಇರುವಷ್ಟು ಹೊತ್ತು ಅವರ ಜೊತೆಗೆ ಇದ್ದು ಹೆಜ್ಜೆ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಅಧಿನಾಯಕಿಯ ಮೆಚ್ಚುಗೆಗೆ ಪಾತ್ರವಾಗಿದ್ದು ಗಮನಾರ್ಹ.
ಸ್ಥಳೀಯ ಕನ್ನಡ ಭಾಷೆಯ ಜತೆ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಸಂವಹನ ಕಲೆ ರೂಢಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಷ್ಟ್ರ ನಾಯಕಿ ಸೋನಿಯಾ ಗಾಂಧಿ ಅವರ ಯೋಗಕ್ಷೇಮ ವಿಚಾರಿಸಿ ಮನಗೆದ್ದರು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಕಾಂಗ್ರೆಸ್ ನಾಯಕರು ಸಹ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವರ್ಚಸ್ಸಿಗೆ ತಲೆದೂಗಿದ್ದು ಕಂಡುಬಂತು.
ಸೋನಿಯಾ ಗಾಂಧಿ ಅವರೊಂದಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೆಜ್ಜೆ ಹಾಕುತ್ತಿರುವ ದೃಶ್ಯವನ್ನು ರಾಷ್ಟ್ರಾದ್ಯಂತ ದೃಶ್ಯಮಾಧ್ಯಮಗಳು ಅಂದು ಪ್ರಧಾನವಾಗಿ ಬಿಂಬಿಸಿದವು. ಈ ಸಂದರ್ಭದಲ್ಲಿ ಕರ್ನಾಟಕದ ಈ ನಾಯಕಿಯ ಬಗ್ಗೆ ಮಾಧ್ಯಮಗಳು ಗಮನ ಸೆಳೆದವು ಮಾತ್ರವಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಕರ್ನಾಟಕದ ಭವಿಷ್ಯದ ಪ್ರಭಾವಿ ನಾಯಕಿ ಎಂಬ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿದವು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹಲವು ಮಹಿಳಾ ನಾಯಕಿಯರನ್ನು ಹೊಂದಿದೆ. ಆದರೆ ಅವರೆಲ್ಲರಿಗಿಂತ ಮುಂಚೂಣಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗುರುತಿಸಿ ಕೊಂಡಿದ್ದು ವಿಶೇಷವಾಗಿತ್ತು.
ಒಟ್ಟಾರೆಯಾಗಿ, ಬೆಳಗಾವಿ ಜಿಲ್ಲೆಯ ಹೆಮ್ಮೆಯ ನಾಯಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವರ್ಚಸ್ಸು ಹಾಗೂ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪವರ್ ಫುಲ್ ನಾಯಕಿ ಆಗಿ ಗುರುತಿಸಿಕೊಂಡಿರುವ ಅವರು ಕಾಂಗ್ರೆಸ್ ಪಕ್ಷದ ಮಹತ್ವದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಯುವ ನಾಯಕ ರಾಹುಲ್ ಗಾಂಧಿ ಅವರ ಜತೆಗೂ ಹೆಜ್ಜೆ ಹಾಕಿ ರಾಜ್ಯಾದ್ಯಂತ
ತಮಗಿರುವ ಪ್ರಭಾವವನ್ನು ಸಾಬೀತು ಪಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದ್ಯ ಬೆಳಗಾವಿ ಜಿಲ್ಲೆಗೆ ಮಾತ್ರ ನಾಯಕಿಯಲ್ಲ. ಇಡೀ ಕರ್ನಾಟಕ ಗುರುತಿಸುವ ನಿಟ್ಟಿನಲ್ಲಿ ಮುಂಚೂಣಿ ನಾಯಕಿಯಾಗಿ ಗುರುತಿಸಲ್ಪಡುತ್ತಿರುವುದು ವಿಶೇಷವಾಗಿದೆ.
ಭಾರತ ಜೊಡೋ ಪಾದಯಾತ್ರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು:
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೊಡೋ ಪಾದಯಾತ್ರೆಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ತೆರಳಿದರು.
150ಕ್ಕೂ ಹೆಚ್ಚು ವಾಹನಗಳಲ್ಲಿ ಹೊರಟ ಕಾರ್ಯಕರ್ತರಿಗೆ ಚನ್ನರಾಜ ಹಟ್ಟಿಹೊಳಿ ಮಾರ್ಗದರ್ಶನ ಮಾಡಿ, ಕಾರ್ಯಕರ್ತರ ಜೊತೆಯೇ ತೆರಳಿದರು. ಎಲ್ಲರೂ ಸಂಜೆಯ ಹೊತ್ತಿಗೆ ಬಳ್ಳಾರಿಯಲ್ಲಿ ಪಾದಯಾತ್ರೆ ಸೇರಿಕೊಂಡರು.
ಪಾದಯಾತ್ರೆ ಕರ್ನಾಟಕ ಪ್ರವೇಶಿಸಿದ ದಿನದಿಂದಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಚನ್ನರಾಜ ಹಟ್ಟಿಹೊಳಿ ಮತ್ತು ಗ್ರಾಮೀಣ ಕ್ಷೇತ್ರದ ಸಹಸ್ರಾರು ಕಾರ್ಯಕರ್ತರು ಸೇರಿಕೊಂಡಿದ್ದಾರೆ.