ಮಂಗಳೂರು :
ಕರಾವಳಿ ಜಿಲ್ಲೆಗಳಿಂದ ಅಯೋಧ್ಯೆಗೆ ಹೆಚ್ಚಿನ ರೈಲ್ವೆ ವ್ಯವಸ್ಥೆ ಮಾಡುವಂತೆ ರಾಮ ಭಕ್ತರು ಒತ್ತಾಯಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಅಂದು ಸಹಸ್ರಾರು ಭಕ್ತರು ಅಯೋಧ್ಯೆಗೆ ತೆರಳಲ್ಲಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಕರಾವಳಿಯ ಭಕ್ತರಿಗೆ ಅನುಕೂಲವಾಗುವ ದಿಸೆಯಲ್ಲಿ ರಾಮ ದೇವರ ಜನ್ಮ ಭೂಮಿಯಾಗಿರುವ ಅಯೋಧ್ಯೆಗೆ ನೇರ ರೈಲ್ವೆ ಸಂಪರ್ಕ ಮಾಡಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
ಭಾರತೀಯ ರೈಲ್ವೆ ಈಗಾಗಲೇ ಅಯೋಧ್ಯೆಗೆ ದೇಶದ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ರೈಲು ವ್ಯವಸ್ಥೆ ಮಾಡುತ್ತಿದೆ. ಕರ್ನಾಟಕದಿಂದ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಿಂದ ರೈಲ್ವೆ ವ್ಯವಸ್ಥೆ ಆಗುತ್ತಿದೆ. ಆದರೆ, ಕರಾವಳಿ ಜಿಲ್ಲೆಗಳಿಂದ ತೆರಳುವ ರಾಮಭಕ್ತರಿಗೆ ಯಾವುದೇ ರೈಲ್ವೆ ವ್ಯವಸ್ಥೆ ಇಲ್ಲ. ಕರಾವಳಿಗರು ದೂರದ ಮುಂಬೈ ಇಲ್ಲವೇ ಬೆಂಗಳೂರಿಗೆ ತೆರಳಿ ಅಯೋಧ್ಯೆಗೆ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳುನಾಡು- ಅಯೋಧ್ಯ ಎಕ್ಸ್ ಪ್ರೆಸ್ ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದರೂ ಕರಾವಳಿ ಜನತೆಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಈ ರೈಲು ಕೇರಳ ಮೂಲಕ ಪ್ರಯಾಣ ಬೆಳೆಸುವುದರಿಂದ ಅಲ್ಲಿನವರು ಸೀಟು ಕಾಯ್ದಿರಿಸುತ್ತಾರೆ. ಕರಾವಳಿ ಜಿಲ್ಲೆಗಳ ಜನತೆಗೆ ಈ ರೈಲಿನಲ್ಲಿ ಸೀಟು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಯೋಧ್ಯೆಗೆ ಕನಿಷ್ಠ ವಾರಕ್ಕೊಂದು ಸಲ ರೈಲು ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದು ಹಲವರು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಅದರಲ್ಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಕರಾವಳಿ ಜಿಲ್ಲೆಗಳ ರಾಮಭಕ್ತರ ಮನವಿಗೆ ಸ್ಪಂದಿಸಿ ವಿಶೇಷ ರೈಲ್ವೆ ವ್ಯವಸ್ಥೆ ಮಾಡಬೇಕಾಗಿದೆ.