ಜಿಲ್ಲಾಸ್ಪತ್ರೆಗೆ ಯುವತಿಯನ್ನು ದಾಖಲಿಸುತ್ತಲೇ ಆಸ್ಪತ್ರೆಯವರು ಎಂಎಲ್ಸಿ ಮಾಡಬೇಕೆಂದು ಹೇಳಿದ ಮರುಕ್ಷಣವೇ ಯುವಕ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಯುವತಿಯ ಸಿಮ್ ಜತೆ ಪರಾರಿಯಾಗಿರುವುದು ಸಹ ಬೆಳಕಿಗೆ ಬಂದಿದೆ. ಒಟ್ಟಾರೆ ಬೈಲಹೊಂಗಲ ಯುವತಿಯ ಸಾವು ಇದೀಗ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಳಗಾವಿ:
ಬೈಲಹೊಂಗಲ ಮೂಲದ 19 ವರ್ಷದ ಯುವತಿ ಸಾವು ಇದೀಗ ಹಲವು ಅನುಮಾನ ಹುಟ್ಟುಹಾಕಿದೆ. ಯುವತಿಯನ್ನು ಅತ್ಯಾಚಾರ ಮಾಡಲಾಗಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಬೈಲಹೊಂಗಲ ಯುವತಿ ಚಿಕಿತ್ಸೆ ಫಲಿಸದೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾಳೆ.
ಯುವತಿ ತಿಂಗಳ ಹಿಂದಷ್ಟೇ ಬೆಂಗಳೂರು ಕಾಲ್ ಸೆಂಟರ್ ಕೆಲಸಕ್ಕೆ ಸೇರಿದ್ದಳು. ಬುಧವಾರ ಅಪರಿಚಿತನೊಬ್ಬ ಆಕೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ನಂತರ ನಾಪತ್ತೆಯಾಗಿದ್ದಾನೆ. ಜಿಲ್ಲಾಸ್ಪತ್ರೆಗೆ ಕುಟುಂಬಸ್ಥರು ಬರುವ ವೇಳೆ ಯುವತಿ ಸಂಪೂರ್ಣವಾಗಿ ನಿಸ್ತೇಜಳಾಗಿದ್ದಳು. ಆಕೆಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದನ್ನು ಮನಗಂಡ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಯುವತಿಯ ತಲೆ ಮತ್ತು ದೇಹದ ಭಾಗದಲ್ಲಿ ಗಾಯದ ಗುರುತು ಕಂಡು ಬಂದಿದೆ. ಜತೆಗೆ ಮೈಯಲ್ಲಿ ಸಿಗರೇಟ್ ನಿಂದ ಸುಟ್ಟ ಗಾಯವಾಗಿದೆ ಎಂದು ಹೇಳಲಾಗಿದೆ. ಅತ್ಯಾಚಾರ ಎಸಗಲಾಗಿಯೇ ಎಂಬ ಶಂಕೆ ವ್ಯಕ್ತವಾಗಿದೆ.
ಯುವತಿ ಮೂಲತಃ ಬೈಲಹೊಂಗಲ ಪಟ್ಟಣದ ನಿವಾಸಿ. ಯುವತಿಯ ತಂದೆ ಆಟೋ ಚಾಲಕರು.
ಇವರು ತಮ್ಮ ಮಗಳ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಬಹಳ ಮುಗ್ಧೆ. ಅವಳಿಗೆ ಇಂತಹ ಸಾವು ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಯುವತಿಯ ಅಕಾಲಿಕ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಯುವತಿ ಬುಧವಾರವಷ್ಟೇ ಬೆಂಗಳೂರಿನಿಂದ ಬೆಳಗಾವಿಗೆ ಖಾಸಗಿ ಬಸ್ ನಲ್ಲಿ ಬಂದಿದ್ದಳು. ಅರೆಪ್ರಜ್ಞಾ ವಸ್ಥೆಯಲ್ಲಿ ಬಂದಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಯುವಕ ಕಣ್ಮರೆಯಾಗಿರುವುದು ಇದೀಗ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಆ ಜಾಡನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಅರೆಪ್ರಜ್ಞಾವಸ್ಥೆಯಲ್ಲಿಯೇ ಯುವತಿ ಪಾಲಕರೊಂದಿಗೆ ಮಾತನಾಡಿರುವ ವಿಷಯವೂ ಬಹಿರಂಗವಾಗಿದೆ. ಒಂದು ಮೂಲದ ಪ್ರಕಾರ ಬೆಂಗಳೂರು ಬಸ್ ಮುಂಜಾನೆ ಹುಬ್ಬಳ್ಳಿ ತಲುಪಿ ಅಲ್ಲಿಂದ ಬೆಳಗಾವಿ ಕಡೆ ಬಂದಾಗ ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಮತ್ತು ನಾಲ್ವರು ಪ್ರಯಾಣಿಕರು ಮಾತ್ರ ಇದ್ದರು ಎನ್ನಲಾಗಿದೆ. ಬೆಳಗಾವಿಯ ಆರ್ ಟಿಒ ಕಚೇರಿ ಬಳಿ ತಲುಪಿದ ನಂತರ ಯುವಕ ನೊಬ್ಬ ಆಕೆಯನ್ನು ರಿಕ್ಷಾದಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾನೆ. ನಂತರ ಆತ ಯುವತಿಯ ಗಂಭೀರ ಪರಿಸ್ಥಿತಿ ಅರಿತು ಪಲಾಯನ ಮಾಡಿದ್ದಾನೆ.
ಪೊಲೀಸರ ಹೇಳಿಕೆ :
ಪ್ರಕರಣದ ಬಗ್ಗೆ ಬೆಳಗಾವಿ ಪೊಲೀಸರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ. ಬೆಂಗಳೂರಿನಲ್ಲಿದ್ದ ಯುವತಿ ಪಾಲಕರಿಗೆ ವಿಷಯ ತಿಳಿಸದೆ ಯುವಕನ ಜೊತೆ ಗೋವಾಕ್ಕೆ ತೆರಳಿದ್ದಳು. ಯುವಕ ಬಹುಶಃ ಯುವತಿಯ ಪ್ರೇಮಿಯಾಗಿರಬಹುದು. ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಹಿಂದಿರುಗಿದ್ದ ಯುವತಿ ಖಿನ್ನಳಾಗಿದ್ದಳು. ಅಂದೇ ರಾತ್ರಿ ಬೆಳಗಾವಿಗೆ ತೆರಳಲು ಖಾಸಗಿ ಬಸ್ ನಿಲ್ದಾಣದ ಪಿಕಪ್ ಪಾಯಿಂಟ್ ಬಳಿ ಬಂದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆ ಆಗ ಬೈಲಹೊಂಗಲದಲ್ಲಿ ಪಾಲಕರಿಗೆ ಫೋನ್ ಮಾಡಿ ತಾನು ಬರುತ್ತಿರುವ ವಿಷಯವನ್ನು ತಿಳಿಸಿ ಫೋನ್ ಆಫ್ ಮಾಡಿದ್ದಾಳೆ. ಆರ್ ಟಿಒ ವೃತ್ತದಲ್ಲಿ ಯುವತಿಯನ್ನು ಬಸ್ ನಿಂದ ಇಳಿಸಿಕೊಂಡು ರಿಕ್ಷಾದಲ್ಲಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಬಹುತೇಕ ಯುವತಿಯ ಪ್ರೇಮಿಯೇ ಈ ಘಟನೆ ಹಿಂದಿರಬಹುದು ಎನ್ನುವುದು ಪೋಲಿಸರ ಅನುಮಾನವಾಗಿದೆ.
ಒಟ್ಟಾರೆ, ಪೊಲೀಸರು ಈ ಪ್ರಕರಣವನ್ನು ಬೇಧಿಸಬೇಕು ಎನ್ನುವುದು ಯುವತಿಯ ಪಾಲಕರು ಹಾಗೂ ನಾಗರಿಕರ ಆಗ್ರಹವಾಗಿದೆ.