ಬೆಳಗಾವಿ: ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲೆ ಅಮಾನುಷ ಹಲ್ಲೆಗಳು, ಮಾನಭಂಗ ಪ್ರಕರಣಗಳು, ದಾಂಧಲೆಗಳು, ಕಲ್ಲುತೂರಾಟ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಂತಹ ದುರ್ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ಸರಣಿಯಾಗಿ ಮುಂದುವರೆದಿವೆ.
ದುಷ್ಠ ಕಾರ್ಯಗಳಿಂದ ಬೆಳಗಾವಿ ಜಿಲ್ಲೆ ದೇಶಾದ್ಯಂತ ಪ್ರಮುಖ ಕ್ರೈಂ ಸ್ಥಳವಾಗಿ ಸುದ್ದಿಯಾಗುತ್ತಿದೆ. ಅಂಗನವಾಡಿ ಶಾಲಾ ಮಕ್ಕಳು ಹೂವು ಕಿತ್ತರು ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯ ಮೂಗು ಕತ್ತರಿಸಿದ್ದಾನೆ ಧೂರ್ತನೊಬ್ಬ. ಅಂಗನವಾಡಿ ಮಕ್ಕಳು ಪಕ್ಕದಮನೆಯ ಹೂವು ಕಿತ್ತರು ಎಂಬುವುದನ್ನು ಮುಂದಿಟ್ಟುಕೊಂಡು ಕುಡುಗೋಲಿನಿಂದ( ಮಾರಕಾಸ್ತ್ರ) ಹಲ್ಲೆ ನಡೆಸಿ ಮೂಗು ಕತ್ತರಿಸಿದ ಘಟನೆ ಹೊಸ ವರ್ಷದ ಮೊದಲ(ಜ.1) ದಿನವೇ ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ನಡೆದಿದೆ. ಮೂಗು ಕತ್ತರಿಸಿ ಹೋಗಿದ್ದು, ಜೊತೆಗೆ ಶ್ವಾಸಕೋಶದಲ್ಲಿ ರಕ್ತ ಹರಿದು ಸಾವು ಬದುಕಿನಮಧ್ಯೆ ಅಮಾಯಕ ಮಹಿಳೆ ಸುಗಂಧಾ ಮೋರೆ(50) ನರಳಾಡುತ್ತಿದ್ದಾಳೆ. ಹಾಲುಗಲ್ಲದ ಅಂಗನವಾಡಿ ಮಕ್ಕಳು ಆಟವಾಡುತ್ತ ಮಲ್ಲಿಗೆ ಹೂವು ಕಿತ್ತರು ಎಂಬ ಕಾರಣಕ್ಕೆಇಂತಹ ಧೂರ್ತತನ ಮೆರೆದಿದ್ದಾನೆ ಕಿರಾತಕ ಕಲ್ಯಾಣಿ ಮೋರೆ.
ಹಲ್ಲೆ ನಡೆಸಿ ಮೂಗು ಕತ್ತರಿಸುವವರೆಗೆ ಗ್ರಾಮಸ್ಥರು, ನೆರೆ ಹೊರೆಯವರು ಏನು ಮಾಡುತ್ತಿದ್ದರು, ಘಟನೆ ನಡೆದು ಪೂರ್ಣ ಒಂದು ದಿನ ಕಳೆದರೂ ಪೊಲೀಸರು ಯಾಕೆ ರಕ್ಷಣೆಗೆ ಬರಲಿಲ್ಲ ಎಂಬಿತ್ಯಾದಿ ಹಲವಾರು ಪ್ರಶ್ನೆಗಳು ಪುಟಿದಿವೆ. ಗೂಂಡಾರಾಜ್ ಆಗಿ ಜಿಲ್ಲೆ ಪರಿವರ್ತನೆ ಆಗಲು ಕಾರಣ ಸರಕಾರವೇ ಹೇಳಬೇಕಿದೆ. ಜಿಲ್ಲೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಧೂರ್ತರಿಗೆ ಸಾರ್ವಜನಿಕವಾಗಿ ಮಾನಭಂಗದ ಹಿಂಸೆ ನೀಡಿ ಛಡಿಯೇಟು ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಹಾಗೂ ಬೆಳಗಾವಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು.