ಬೆಳಗಾವಿ:
ಭಗವದ್ಗೀತೆಗೆ ಈಗ ಸಾರ್ವತ್ರಿಕವಾಗಿ ಒಪ್ಪಿಗೆ ಸಿಕ್ಕಿದೆ. ಅಭಿಯಾನ ಮುಗಿದರೂ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಮುಂದುವರಿಯಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಆಶಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಭಗವದ್ಗೀತೆ ಅಭಿಯಾನದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶಿರ್ವಚನ ನೀಡುತ್ತಿದ್ದರು. ಸುಂದರವಾಗಿ, ಅಚ್ಚುಕಟ್ಟಾಗಿ ಭಗವದ್ಗೀತೆ ಅಭಿಯಾನ ಮಾಡಿಕೊಟ್ಟಿದ್ದೀರಿ. ಮಾತೆಯರು, ಕಾರ್ಯಕರ್ತರ ಶ್ರಮ ಮೆಚ್ಚುವಂತದ್ದು. ಅಭಿಯಾನ ಸಮಿತಿಯನ್ನು ವಿಸರ್ಜಿಸುವುದಿಲ್ಲ. ಇದು ಹಾಗೆಯೇ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ದೇವರನ್ನು ನೋಡಲು ಸಾಧ್ಯವಿದೆ ಎನ್ನುವ ಸಂದೇಶ ಭಗವದ್ಗೀತೆಯಲ್ಲಿದೆ. ನಮ್ಮಲ್ಲಿ ಸ್ವಲ್ಪ ಸಂಸ್ಕಾರ ಇದ್ದರೆ ಭಗವದ್ಗೀತೆಯ ಅನುಭಾವ ರೋಮಾಂಚಕ. ಭಗವಂತನ ಕಾರ್ಯದಲ್ಲಿ ತೊಡಗಿಕೊಳ್ಳುವುದೇ ದೊಡ್ಡ ಪುಣ್ಯದ ಕಾರ್ಯ. ಭಗವದ್ಗೀತೆ ಈಗ ಸಮಾಜದ ಅವಶ್ಯಕತೆ ಮತ್ತು ಅಪೇಕ್ಷೆ ಎರಡೂ ಆಗಿದೆ. ಕೆಲವು ಅವಶ್ಯಕತೆ ಇದ್ದರೂ ಅಪೇಕ್ಷೆ ಇರುವುದಿಲ್ಲ. ಕೆಲವು ಅಪೇಕ್ಷೆ ಇದ್ದರೂ ಅವಶ್ಯಕತೆ ಇರುವುದಿಲ್ಲ. ಎರಡೂ ಇದ್ದಾಗ ಮಾತ್ರ ಅದಕ್ಕೆ ಮಹತ್ವ ಬರುತ್ತದೆ. ಭಗವದ್ಗೀತೆಗೆ ಸಾರ್ವತ್ರಿಕ ಅಕ್ಸೆಪ್ಟನ್ಸ್ ಬಂದಿದೆ. ನಮ್ಮ ಕಾಲದಲ್ಲಿ ಬಂದಿದ್ದು ದೇವರ ಅನುಗ್ರಹ. ಶಾಲೆಗಳಲ್ಲಿ ಭಗವದ್ಗೀತೆ ಪಠಣದ ಪರಿಪಾಠ ಮುಂದುವರಿಯಬೇಕು ಎಂದು ಶ್ರೀಗಳು ಆಶಿಸಿದರು.
ಅಭಿಯಾನ ಸಮಿತಿಯ ಅಧ್ಯಕ್ಷ ಗೋಪಾಲ ಜಿನಗೌಡ, ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಖಜಾಂಚಿ ಸೀತಾರಾಮ ಭಾಗ್ವತ, ಉದ್ಯಮಿಗಳಾದ ಸತೀಶ್ ನೇತಲ್ಕರ್, ದಯಾನಂದ ನೇತಲ್ಕರ್, ವಿದ್ವಾನ್ ಸೂರ್ಯನಾರಾಯಣ ಭಟ್, ವಿದ್ವಾನ್ ಅರುಣ ಹೆಗಡೆ, ಮಹಾನಗರ ಪಾಲಿಕೆ ಸದಸ್ಯರಾದ ಜಯತೀರ್ಥ ಸವದತ್ತಿ, ರಾಜಶೇಖರ ಡೋಣಿ, ಅಭಿಯಾನ ಸಮಿತಿಯ ಪದಾಧಿಕಾರಿಗಳು, ಪ್ರಶಿಕ್ಷಕಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.