ಕೊಪ್ಪಳ :
ಹನುಮಮಾಲೆ ಧರಿಸಿ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ರಕ್ಷಣೆ ಇರಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜನರು ಬಯಸುವಂತೆ, ಸರ್ಕಾರದ ಆಶಯದಂತೆ, ತಮ್ಮ ನಿರೀಕ್ಷೆಯಂತೆ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಯಶಸ್ವಿಯಾಗಿದೆ. ಮಹತ್ವದ ಧಾರ್ಮಿಕ ಕಾರ್ಯಕ್ರಮವೊಂದನ್ನು ಯಶಸ್ಸುಗೊಳಿಸಿದ ಹೆಮ್ಮೆ ನಮ್ಮದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೇಗುಂದಿಯ ಅಂಜನಾದ್ರಿಯಲ್ಲಿ ಡಿಸೆಂಬರ್ 24ರಂದು ನಡೆದ ಹನುಮಮಾಲಾ ವಿಸರ್ಜನೆಯ ಕಾರ್ಯಕ್ರಮಕ್ಕೆ ಆಗಮಿಸಿ ಹನುಮ ದೇವರ ದರ್ಶನ ಪಡೆದು ಬಳಿಕ ವೇದಪಾಠಶಾಲೆಗೆ ಆಗಮಿಸಿ ಅಲ್ಲಿನ ಪ್ರಸಾದ ವ್ಯವಸ್ಥೆಯನ್ನು ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕಾರ್ಯಕ್ರಮದ ಯಶಸ್ವಿಗೆ ಅಚ್ಚುಕಟ್ಟಾದ ಯೋಜನೆಯನ್ನು ರೂಪಿಸಲಾಗಿತ್ತು ಎಂದು ತಿಳಿಸಿದ ಸಚಿವರು, ತಮ್ಮ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಭೆ, ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿಗಳಾಗಿ ನಿಯೋಜನೆಯಾಗಿದ್ದ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಹ ಹಲವಾರು ಸುತ್ತಿನ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತಾವು ಹಾಗೂ ಮುಜರಾಯಿ ಸಚಿವರು ಸಭೆಯಲ್ಲಿ ಹೇಳಿದಂತೆ ತಮ್ಮ ನಿರೀಕ್ಷೆಗೆ ತಕ್ಕಂತೆ ಮುತುವರ್ಜಿ ವಹಿಸಿ ಕೆಲಸ ಮಾಡಿ ಕಾರ್ಯಕ್ರಮ ಯಶಸ್ಸುಗೊಳಿಸಿದ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಸಮರ್ಥ ಅಧಿಕಾರಿಗಳಾಗಿದ್ದರಿಂದ ಇವರು ಕಾರ್ಯಕ್ರಮದ ನೇತೃತ್ವ ವಹಿಸಿ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದ್ದರಿಂದ ಹನುಮಮಾಲಾ ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ನಡೆಯುವಂತಾಯಿತು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದರು. ಮುಜರಾಯಿ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ 40 ಲಕ್ಷ ರೂ ಕೊಡುವುದಾಗಿ ತಿಳಿಸಿ ಅಗತ್ಯವಿದ್ದಲ್ಲಿ ಇನ್ನು ಸಹ ಕಾರ್ಯಕ್ರಮದ ಖರ್ಚು ವೆಚ್ಚವನ್ನು ಕೊಡಲಾಗುವುದು ಎಂದು ಹೇಳಿ ಸಹಕರಿಸಿದ ಮುಜರಾಯಿ ಸಚಿವರಿಗೆ ಸಹ ತಾವು ಅಭಿನಂದನೆ ತಿಳಿಸುವುದಾಗಿ ಸಚಿವರು ಹೇಳಿದರು.
ಈ ಬಾರಿ ಹನುಮಮಾಲಾ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಯೋಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಎರಡು ದಿನಗಳ ಕಾಲ ಹನುಮ ಮಾಲಾಧಾರಿಗಳು ಶಾಂತ ರೀತಿಯಿಂದ ಅಂಜನಾದ್ರಿಗೆ ಆಗಮಿಸಿ ತಾಳ್ಮೆ ಸಹನೆಯಿಂದ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದು ಸಹಕಾರ ನೀಡಿದ್ದಕ್ಕೆ ಸ್ಥಳೀಯ ಹಾಗೂ ರಾಜ್ಯದ ಮತ್ತು ವಿವಿಧ ದೇಶಗಳಿಂದ ಆಗಮಿಸಿದ ಹನುಮ ಭಕ್ತರಿಗೆ ತಾವು ವಿಶೇಷ ಅಭಿನಂದನೆಗಳನ್ನು ತಿಳಿಸುವುದಾಗಿ ಸಚಿವರು ಹೇಳಿದರು.
ಈ ವರ್ಷ ಹನುಮಮಾಲಾ ಕಾರ್ಯಕ್ರಮವನ್ನು ಭಿನ್ನವಾಗಿ ನಡೆಸಬೇಕು ಎಂದು ಯೋಜಿಸಿದ್ದೆವು. ಇದಕ್ಕೆ ಗಂಗಾವತಿಯ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಸಹಕಾರ ನೀಡಿ ‘ರಾಜ್ಯ ಸರ್ಕಾರದಿಂದ ಉತ್ತಮ ಕಾರ್ಯಕ್ರಮವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸುವೆ’ ಎಂದು ಅವರು ಪ್ರತಿಕ್ರಿಯಿಸಿದ್ಧಾರೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ. ಇದು ಸಹ ನಮ್ಮ ಕಾರ್ಯಯೋಜನೆಗೆ ಸಂದ ಗೌರವವಾಗಿದೆ ಎಂದು ಸಚಿವ ತಂಗಡಗಿ ಅವರು ಹೇಳಿದರು.
ಎರಡು ದಿನಗಳ ಸಮಯವೂ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಅಂಜನಾದ್ರಿಯಲ್ಲಿದ್ದು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರ ಸಮ್ಮುಖದಲ್ಲಿ ಹಗಲಿರುಳು ಕೆಲಸ ಮಾಡಿದ್ದಾರೆ. ಪ್ರಸಾದವನ್ನು ರುಚಿಕಟ್ಟಾಗಿ ಸಿದ್ಧಪಡಿಸಿ ಭಕ್ತರಿಗೆ ಉಣಬಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಮೊದಲೇ ವಿವಿಧ ಸಮಿತಿಗಳನ್ನು ರಚಿಸಿ ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಸ್ತುಬದ್ಧವಾಗಿ ಕೆಲಸ ಹಂಚಿಕೆ ಮಾಡಿದ್ದರಿಂದ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುವಂತಾಯಿತು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಸಹ ಶಿಸ್ತುಬದ್ಧ ರೀತಿಯಲ್ಲಿ ಯೋಜನೆ ರೂಪಿಸಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಲಸ ಹಂಚಿಕೆ ಮಾಡಿದ್ದರಿಂದ ಪ್ರತಿಯೊಂದು ಕಡೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಣುತ್ತಿದ್ದು ಯಾವುದೇ ಕಡೆಗಳಲ್ಲಿ ಅಹಿತಕರ ಘಟನೆಗಳು ವರದಿಯಾಗಿಲ್ಲ. ಪೊಲೀಸ್ ಇಲಾಖೆ ಸಹ ಖಡಕ್ ಆಗಿ ಕೆಲಸ ನಿರ್ವಹಿಸಿದೆ. ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾವು ಅಭಿನಂದಿಸುವುದಾಗಿ ಸಚಿವರು ಹೇಳಿದರು.
ಶ್ರೀ ಆಂಜನೇಯ ಸ್ವಾಮಿ ಮೇಲೆ ನಮ್ಮ ಸರ್ಕಾರಕ್ಕೆ ವಿಶೇಷ ಭಕ್ತಿ ಇದೆ. ಹನುಮಮಾಲೆ ಧರಿಸಿ ಅಂಜನಾದ್ರಿಗೆ ಬರುವ ಭಕ್ತರು ಯಾವುದೇ ತೊಂದರೆಗೆ ಸಿಲುಕಬಾರದು. ಅವರಿಗೆ ರಕ್ಷಣೆ ನೀಡಬೇಕು. ಅವರು ಶಾಂತಿಯುತವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸಂತಸದಿಂದ ತೆರಳಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಬೇಕು ಎನ್ನುವ ಮುಖ್ಯ ಉದ್ದೇಶವನ್ನು ರಾಜ್ಯ ಸರ್ಕಾರದ ಪರವಾಗಿ ನಾವು ಹೊಂದಿದ್ದೆವು. ನಮ್ಮೆಲ್ಲರ ನಿರೀಕ್ಷೆಯಂತೆ ಜಿಲ್ಲಾಡಳಿತವು ಉತ್ತಮ ಕೆಲಸ ಮಾಡಿದೆ. ಹೀಗಾಗಿ ಉತ್ತಮ ಕೆಲಸ ಮಾಡಿದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಅಭಿನಂದನೆ ತಿಳಿಸುವುದು ಮತ್ತು ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಪೊಲೀಸ್ ಉಪ ವಿಭಾಧಿಕಾರಿ ಶರಣಬಸಪ್ಪ ಸುಬೇಧಾರ, ಸಿದ್ಧಲಿಂಗಪ್ಪಗೌಡ ಹಾಗೂ ತಹಸೀಲ್ದಾರರಾದ ವಿಶ್ವನಾಥ ಮುರುಡಿ ಸೇರಿದಂತೆ ಇನ್ನೀತರರು ಇದ್ದರು.
*ಪ್ರಸಾದ ಬಡಿಸಿದ ಸಚಿವರು:* ಅಂಜನಾದ್ರಿಗೆ ಆಗಮಿಸಿದ ವೇಳೆ ಸಚಿವರಾದ ಶಿವರಾಜ ತಂಗಡಗಿ ಅವರು ವೇದಪಾಠಶಾಲೆಯ ಬಳಿಯಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದರು. ಹನುಮ ಭಕ್ತರು ಮತ್ತು ಪತ್ರಕರ್ತರ ಜೊತೆಗೆ ಪ್ರಸಾದವನ್ನು ಸಹ ಸೇವಿಸಿ ಹನುಮ ಭಕ್ತರ ಸಂತಸದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಆಪ್ತ ಸಹಾಯಕ ಇನಾಯತ್ ಸೇರಿದಂತೆ ಇನ್ನೀತರರು ಇದ್ದರು.